ಉಡುಪಿ: ಇಂದು ಕರ್ನಾಟಕದ ಎಸ್ಎಸ್ಎಲ್ಸಿ ಪರೀಕ್ಷೆ ಲಿತಾಂಶ ಪ್ರಕಟವಾಗುತ್ತಿದೆ. ಇದೇ ವೇಳೆ ಪರಿಶಿಷ್ಟ ಪಂಗಡ ಮತ್ತು ಜಾತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇದೆ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬರುವ ವಿದ್ಯಾರ್ಥಿಗೆ ತಲಾ ಒಂದು ಲಕ್ಷ ರೂ. ನಗದು ಬಹುಮಾನವನ್ನು ಸಮಾಜ ಕಲ್ಯಾಣ ಇಲಾಖೆ ಪ್ರಕಟಿಸಿದೆ.
ಇಲಾಖೆಯ ಕಾರ್ಯದರ್ಶಿ ಕೆ.ಸಿ. ಕುಮಾರ ಅವರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಹೆಸರಿನಲ್ಲಿ ಈ ನಗದು ಬಹುಮಾನ ನೀಡಲಾಗುತ್ತಿದೆ.
ಪ್ರತೀ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗೆ ತಲಾ 1ಲಕ್ಷ ರೂ. ಬಹುಮಾನ ನೀಡಲು ರಾಜ್ಯ ಸರಕಾರ 2020-21ನೇ ಸಾಲಿನ ಬಜೆಟ್ನಲ್ಲಿ 60 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.