Wednesday, August 17, 2022

Latest Posts

ಉಡುಪಿ ಜಿಲ್ಲೆಗೆ ಮತ್ತೊಂದು ಕೋವಿಡ್ ‘ಮಹಾ’ಘಾತ: ಮುಂಬೈನಿಂದ ಬಂದ 54ರ ಹರೆಯದ ವ್ಯಕ್ತಿ ಸಾವು

ಉಡುಪಿ: ಕಳೆದೊಂದು ವಾರದಿಂದ ಕೋವಿಡ್-19 ಸೋಂಕು ಪ್ರಕರಣಗಳು ಇಳಿಮುಖವಾಗಿ ತಣ್ಣಗಿದ್ದ ಉಡುಪಿ ಜಿಲ್ಲೆಗೆ ಮತ್ತೊಂದು ಆಘಾತ ಅಪ್ಪಳಿಸಿದೆ. ಗುರುವಾರ ಮುಂಬೈನಿಂದ ಬಂದ 54ರ ಹರೆಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶುಕ್ರವಾರ ಅವರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
ಗುರುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಮುಂಬೈನಿಂದ ಆಗಮಿಸಿದ್ದ ವ್ಯಕ್ತಿ ಜಿಲ್ಲಾ ಸ್ವೀಕೃತಿ ಕೇಂದ್ರಕ್ಕೆ ತೆರಳಿದ್ದಾರೆ. ಅವರ ದೇಹದ ಉಷ್ಣತೆ ತಪಾಸಣೆ ಮಾಡಿದಾಗ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರನ್ನು ಗೃಹ ದಿಗ್ಬಂಧನಕ್ಕೆ ಕಳುಹಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕುಂದಾಪುರದ ತೆಕ್ಕಟ್ಟೆಯಲ್ಲಿರುವ ಮನೆಗೆ ತಲುಪಿದ್ದಾರೆ. ಸಂಜೆ 5.30ರ ಸುಮಾರಿಗೆ ಕುಸಿದುಬಿದ್ದಿದ್ದಾರೆ. ಮರಣಕ್ಕೆ ಕಾರಣ ಇನ್ನು ಗೊತ್ತಾಗಬೇಕಿದೆ. ಮರಣ ಹೊಂದಿದ ನಂತರ ಗಂಟಲ ದ್ರವ ಮಾದರಿ ತೆಗೆದು ಪರೀಕ್ಷೆ ನಡೆಸಿದಾಗ ಅವರಿಗೆ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.
ಇದು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಮರಣ ಹೊಂದಿದ ಎರಡನೇ ಪ್ರಕರಣವಾಗಿದೆ. ಆದರೆ ಮುಂಬೈನಿಂದ ಬರುವ ಸಮಯದಲ್ಲಿ ತಡವಾಗಿ ವೈದ್ಯರಿಗೆ ಮಾಹಿತಿ ನೀಡದೇ ಮನೆಯಲ್ಲಿದ್ದು, ಬಂದ ನಾಲ್ಕು ತಾಸಿನಲ್ಲಿ ಮರಣ ಹೊಂದಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿ, ಮೃತಪಟ್ಟವರ ಜೊತೆ ನಾಲ್ವರು ಬಂದಿದ್ದಾರೆ. ಅವರ ಗಂಟಲ ದ್ರವದ ಮಾದರಿಯನ್ನು ಪಡೆಯಲಾಗಿದೆ. ಅವರ ಪರೀಕ್ಷಾ ವರದಿ ಬಂದ ನಂತರ ಗೊತ್ತಾಗಲಿದೆ. ಎಲ್ಲರೂ ಜೊತೆಯಲ್ಲಿದ್ದರು. ಎಲ್ಲರೂ ಗೃಹ ದಿಗ್ಬಂಧನದಲ್ಲಿದ್ದರಿಂದ ಈಗಾಗಲೇ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನು ಆ ಮನೆಯನ್ನು ಕಂಟೈನ್ಮೆಂಟ್ ಝೋನ್ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯಗಳಿಂದ ಬಂದವರು ಹಾಗೂ ಉಡುಪಿ ಜಿಲ್ಲೆಯಲ್ಲಿರುವವರು ತಮಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣ ಮಾಹಿತಿ ನೀಡಬೇಕು. ಬೇಗ ತಿಳಿಸಿ, ಪರೀಕ್ಷೆಗೊಳಪಟ್ಟರೆ, ಅವರ ಪ್ರಾಣ ರಕ್ಷಿಸಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಎಲ್ಲವನ್ನು ಮುಚ್ಚುಮರೆ ಮಾಡಿ, ಕೊನೆಯ ಗಳಿಗೆಯಲ್ಲಿ ಏನೇ ಪ್ರಯತ್ನ ಮಾಡಿದರೂ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಸಂಪೂರ್ಣವಾಗಿ ಕೋವಿಡ್ ಬರುವುದನ್ನು ತಡೆಯಲಾಗುವುದಿಲ್ಲ. ಆದರೆ ಸೋಂಕು ಬಂದ ನಂತರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಸಾವಿರ ಪ್ರಕರಣಗಳು ಕಂಡು ಬಂದರೂ ಒಂದೂ ಜೀವ ಹಾನಯಾಗದಂತೆ ನಮ್ಮ ವೈದ್ಯರ ತಂಡ ನೋಡಿಕೊಳ್ಳುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.
ಈಗಾಗಲೇ ಮೆಡಿಕಲ್ ಅಂಗಡಿಗಳಿಗೆ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿಗಳನ್ನು ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಯಾರೂ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರೆ, ಸಿರಪ್‌ಗಳನ್ನು ತೆಗೆದುಕೊಳ್ಳಬಾರದು. ಸಣ್ಣ ಲಕ್ಷಣಗಳಿದ್ದರೂ ತಕ್ಷಣ ಫೀವರ್ ಕ್ಲಿನಿಕ್‌ಗಳಿಗೆ ಬಂದು ತಪಾಸಣೆಗೊಳಪಡಬೇಕು. ಸಾರ್ವಜನಿಕರು ಕೊನೆಯ ಗಳಿಗೆಯಲ್ಲಿ ಬಂದು ವೈದ್ಯರಿಗೂ ಜೀವ ಉಳಿಸಲು ಸಮಯಾವಕಾಶ ಇಲ್ಲದಂತೆ ಸನ್ನಿವೇಶ ಸೃಷ್ಟಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ವಿನಂತಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!