Monday, August 15, 2022

Latest Posts

ಉಡುಪಿ| ಜಿಲ್ಲೆಗೆ ಮುಂಬೈ ಆತಂಕ ಶುರು: ಮಹಾರಾಷ್ಟ್ರದಿಂದ ಆಗಮಿಸಿದ 3031 ಮಂದಿ ಪ್ರಯಾಣಿಕರು

ಉಡುಪಿ: ಮೂರು ದಿನಗಳ ಹಿಂದೆ ಜಿಲ್ಲೆಗಾಗಮಿಸಿದ ದುಬೈ ಪ್ರಯಾಣಿಕರಿಂದ 47 ದಿನಗಳ ಬಳಿಕ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇನ್ನು ಮುಂದೆ ಉಡುಪಿ ಜಿಲ್ಲೆಗೆ ಮುಂಬೈ ಆತಂಕ ಶುರುವಾಗಲಿದೆ.

ವಿದೇಶದಿಂದ ವಿಮಾನದಲ್ಲಿ ಆಗಮಿಸಿದ ಉಡುಪಿ ಜಿಲ್ಲೆಯ 49 ಮಂದಿಯಲ್ಲಿ 6 ಜನರಿಗೆ ಸೋಂಕು ಕಂಡುಬಂದಿದೆ. ಈ ನಡುವೆ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವವರು ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

11 ರಾಜ್ಯಗಳಿಂದ ಬಂದಿರುವ ಜನ: ಲಾಕ್‌ಡೌನ್‌ನಿಂದ ತೆಲಂಗಾಣ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡವರು ಪ್ರಸ್ತುತ ಉಡುಪಿ ಜಿಲ್ಲೆಗೆ ಮರಳುತ್ತಿದ್ದಾರೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರೆಲ್ಲರನ್ನು ಜಿಲ್ಲಾಡಳಿತವು ಸ್ಥಳೀಯ ತಾಲೂಕು ಆಡಳಿತದ ಮೂಲಕ ಗುರುತಿಸಲ್ಪಟ್ಟ ಹಾಸ್ಟೆಲ್‌ಗಳಲ್ಲಿ ಮತ್ತು ಹೊಟೇಲ್-ಲಾಡ್ಜ್‌ಗಳಲ್ಲಿ ಸರಕಾರಿ ದಿಗ್ಬಂಧನ ಮಾಡುತ್ತಿದೆ.

ಮಹಾರಾಷ್ಟ್ರದಿಂದ 3031 ಜನರು!: ಗುರುವಾರದವರೆಗೆ ನಾನಾ ರಾಜ್ಯಗಳಿಂದ 3596 ಮಂದಿ ಉಡುಪಿ ಜಿಲ್ಲೆಗೆ ಪ್ರಯಾಣಿಕರು ಆಗಮಿಸಿದ್ದಾರೆ. ಹೊರರಾಜ್ಯಗಳಿಂದ ಆಗಮಿಸುವವರಲ್ಲಿ ಮಹಾರಾಷ್ಟ್ರದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಕೆಂಪು ವಲಯದಲ್ಲಿರುವ ಹಾಗೂ ಹಾಟ್‌ಸ್ಪಾಟ್ ಆಗಿರುವ ಆ ಒಂದೇ ರಾಜ್ಯದಿಂದ 3031 ಮಂದಿ ಜಿಲ್ಲೆಗೆ ಬಂದಿದ್ದಾರೆ. ತೆಲಂಗಾಣದಿಂದ 369, ತಮಿಳುನಾಡಿನಿಂದ 55, ಕೇರಳದಿಂದ 46, ಗೋವಾದಿಂದ 32, ಆಂಧ್ರಪ್ರದೇಶದಿಂದ 31, ಗುಜರಾತ್‌ನಿಂದ 22 ಜನರು ಜಿಲ್ಲೆ ಪ್ರವೇಶಿಸಿದ್ದಾರೆ. ಉಳಿದಂತೆ ಕೆಲವು ರಾಜ್ಯಗಳಿಂದ ಬೆರಳೆಣಿಕೆಯ ಮಂದಿ ಬಂದಿದ್ದಾರೆ.

ಹೊರ ರಾಜ್ಯಗಳಿಂದ ಆಗಮಿಸಿದವರ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆ ನಡೆಸಲು 14ನೇ ದಿನ ಪಡೆಯಲಾಗುತ್ತದೆ. ಅದರಂತೆ ಶುಕ್ರವಾರದಿಂದ ಅನ್ಯ ರಾಜ್ಯದಿಂದ ಬಂದವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗುತ್ತಿದೆ. ಅದರ ವರದಿ ಬಂದ ಬಳಿಕವಷ್ಟೇ ಜಿಲ್ಲೆಯನ್ನಾವರಿಸಿರುವ ಕೋವಿಡ್-19 ಆತಂಕ ದೂರವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss