ಉಡುಪಿ ಜಿಲ್ಲೆಯಲ್ಲಿ ಆರು ಮಂದಿಗೆ ಸೋಂಕು ದೃಢ, ಆತಂಕ ಹೆಚ್ಚಿಸುತ್ತಿರುವ ಕೋವಿಡ್- 19

0
214

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರು ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, ಎಲ್ಲರೂ ಮುಂಬೈಯಿಂದ ಆಗಮಿಸಿದವರಾಗಿದ್ದಾರೆ. ಸೋಂಕಿತರಲ್ಲಿ ಇಬ್ಬರು ಮಕ್ಕಳ ಸಹಿತ ನಾಲ್ವರು ಮಹಿಳೆಯರು ಮತ್ತು ಒಬ್ಬ ವೃದ್ಧ ಸೇರಿ ಇಬ್ಬರು ಪುರುಷರಿದ್ದಾರೆ.
ಕುಂದಾಪುರ ತಾಲೂಕಿನ ದಿಗ್ಬಂಧನ ಕೇಂದ್ರದಲ್ಲಿದ್ದ ನಾಲ್ಕರ ಹರೆಯದ ಬಾಲಕಿ (ಪಿ-1433) ಮತ್ತು 15 ವರ್ಷದ ಬಾಲಕಿ (ಪಿ-1434)ಯರಿಬ್ಬರಲ್ಲಿ ಸೊಂಕು ಕಾಣಿಸಿಕೊಂಡಿದೆ. ಬೈಂದೂರು ತಾಲೂಕಿನಲ್ಲಿ ಸರಕಾರಿ ದಿಗ್ಬಂಧನದಲ್ಲಿದ್ದ 74 ವರ್ಷದ ವೃದ್ಧ (ಪಿ-1435) ಮತ್ತು 55ರ ಹರೆಯದ ವ್ಯಕ್ತಿ(ಪಿ-1432)ಗೆ ಸೋಂಕು ಅಂಟಿದೆ. ಹೆಬ್ರಿಯಲ್ಲಿ ತಾಲೂಕಿನಲ್ಲಿ ದಿಗ್ಬಂಧನದಲ್ಲಿದ್ದ 31ವರ್ಷ ಪ್ರಾಯದ ಮಹಿಳೆ (ಪಿ-1436) ಹಾಗೂ 47 ವರ್ಷ ಪ್ರಾಯದ ಮಹಿಳೆ (ಪಿ-1449)ಯರಿಬ್ಬರು ಸೋಂಕಿತರಾಗಿದ್ದಾರೆ.
ಸೋಂಕಿತರದಲ್ಲಿ ಬಾಲಕಿಯರಿಬ್ಬರು ವಾರದ ಹಿಂದೆ ಮೃತಪಟ್ಟ ಸೋಂಕಿತ (ಪಿ-1093) ವ್ಯಕ್ತಿಯ ಪ್ರಾರ್ಥಮಿಕ ಸಂಪರ್ಕದಲ್ಲಿದ್ದವರು. ಮುಂಬೈನಿಂದ ಮೇ 12ರಂದು ಆಗಮಿಸಿದ್ದ 54ರ ಹರೆಯದ ವ್ಯಕ್ತಿ (ಪಿ-1093) ಮೇ 14ರಂದು ಮೃತಪಟ್ಟಿದ್ದರು. ತೀವ್ರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸಾವು ಸಂಭವಿಸಿತ್ತು. ಮೇ 16ರಂದು ವ್ಯಕ್ತಿಗೆ ಕೋವಿಡ್-19 ಸೋಂಕು ತಗುಲಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿತ್ತು. ಆ ವ್ಯಕ್ತಿಗೆ 57 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಈ ಸೋಂಕಿತ ಬಾಲಕಿಯರು ಆತನ ಜೊತೆ ಪ್ರಯಾಣಿಸಿದ್ದರು.
ಸೋಂಕಿತರಿಗೆ 120ಜನ ಪ್ರಾಥಮಿಕ ಸಂಪರ್ಕ
ಹೊಸದಾಗಿ ಸೋಂಕು ಪತ್ತೆಯಾದ ಆರು ಮಂದಿ ಕೂಡ ಸರಕಾರಿ ದಿಗ್ಬಂಧನದಲ್ಲಿದ್ದರು. ಆದರೆ ಮುಂಬೈಯಿಂದ ಪ್ರಯಾಣ ಬೆಳೆಸಿ, ದಿಗ್ಬಂಧನದಲ್ಲಿರುವ ವೇಳೆ ಸೋಂಕಿತರಿಗೆ ಒಟ್ಟು 120 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಇಬ್ಬರು ಮಕ್ಕಳಿಗೆ ಒಟ್ಟು 24 ಜನ ಪ್ರಾಥಮಿಕ ಸಂಪರ್ಕಕ್ಕೆ ಬಂದರೆ, ವೃದ್ಧರಿಗೆ 30 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಇನ್ನೋರ್ವ ಸೋಂಕಿತ ವ್ಯಕ್ತಿಗೆ 30 ಜನ, 31ರ ಹರೆಯದ ಮಹಿಳೆಗೆ 24 ಜನ ಹಾಗೂ 47ರ ಹರೆಯದ ಮಹಿಳೆಗೆ 12 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಎಲ್ಲರನ್ನು ದಿಗ್ಬಂಧನದಲ್ಲಿರಿಸಿ, ಪರೀಕ್ಷೆಗಾಗಿ ಗಂಟಲ ದ್ರವ ಮಾದರಿ ಪಡೆಯಲಾಗಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಆರು ಮಂದಿಯನ್ನು ಕೂಡ ಉಡುಪಿ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಮಾ. 25ರಿಂದ ಇಂದಿನವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಮಂಗಳವಾರದ ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಗೆ ಬಂದಿದ್ದ ಬಾಲಕಿಯಲ್ಲಿ ಕಂಡು ಬಂದಿತ್ತು. ಆಕೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ 11 ಮಂದಿ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಉಳಿದಂತೆ ಮೂರು ಮಂದಿ ಗುಣಮುಖರಾಗಿದ್ದರೆ, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here