Wednesday, August 17, 2022

Latest Posts

ಉಡುಪಿ| ಜಿಲ್ಲೆಯಲ್ಲಿ ಇಂದು ಮತ್ತೆ ಶತಕ ಸಿಡಸಲಿದೆಯ ಕೊರೋನಾ ಮಹಾಮಾರಿ?

ಉಡುಪಿ: ಅರವತ್ತು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮೂರು ಇದ್ದ ಕೋವಿಡ್-19 ಪ್ರಕರಣಗಳೀಗ ಮುನ್ನೂರರ ಗಡಿಯತ್ತ ಮುನ್ನುಗ್ಗುತ್ತಿದೆ. ಇಂದು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಶತಕ ಸಿಡಿಸುವ ಮೂಲಕ ಆಘಾತ ನೀಡಲಿದೆಯೇ?

ಉಡುಪಿ ಜಿಲ್ಲೆಗೆ ಈಗಾಗಲೇ ಮಹಾರಾಷ್ಟ್ರದಿಂದ 7226 ಮಂದಿ ಆಗಮಿಸಿದ್ದಾರೆ, ಹೊರ ರಾಜ್ಯಗಳಿಂದ 8250ಕ್ಕೂ ಅಧಿಕ ಜನರು ಬಂದಿದ್ದು, ಹೆಚ್ಚಿನವರು ಸಾಂಸ್ಥಿಕ ದಿಗ್ಬಂಧನ ಅವಧಿಯನ್ನು ಪೂರೈಸಿ ತಮ್ಮ ತಮ್ಮ ಮನೆಗಳಿಗೆ ಹಿಂದರುಗಿದ್ದಾರೆ. ಆದರೆ ಅವರ ಕೋವಿಡ್ ಪರೀಕ್ಷಾ ವರದಿಗಳು ಈಗ ಆರೋಗ್ಯ ಇಲಾಖೆಯ ಕೈ ಸೇರುತ್ತಿದ್ದು, ಭಾರೀ ಸಂಖ್ಯೆಯ ಜನರಿಗೆ ಸಾಂಕ್ರಮಿಕ ಸೋಂಕು ತಗುಲಿರುವ ಮಾಹಿತಿ ಇಲಾಖೆಗೆ ಲಭ್ಯವಾಗಿದೆ.

ಮಾರ್ಚ್ ತಿಂಗಳ ಅಂತ್ಯದ ವರೆಗೆ ಉಡುಪಿ ಜಿಲ್ಲೆಯಲ್ಲಿ ಕೇವಲ ಮೂರು ಕೋವಿಡ್-19 ದೃಢಪಟ್ಟ ಪ್ರಕರಣಗಳಿದ್ದರೆ ಒಂದುವರೆ ತಿಂಗಳ ನಂತರ ಹೊರರಾಜ್ಯ ಮತ್ತು ದೇಶಗಳಿಂದ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗಲು ಆರಂಭವಾಯಿತು. ಇದೀಗ ಸೋಂಕು ಪತ್ತೆಯಾಗುತ್ತಿರುವ ಪ್ರಮಾಣ ಉತ್ತುಂಗಕ್ಕೇರುತ್ತಿದೆ. ಕೇವಲ 18 ದಿನಗಳಲ್ಲಿ ಜಿಲ್ಲೆಯಲ್ಲಿ ಖಚಿತಗೊಂಡ ಪ್ರಕರಣಗಳ ಬರೋಬ್ಬರಿ 257. ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ.

ಇಂದು ನೂರಕ್ಕೂ ಪ್ರಕರಣಗಳ ಕೋವಿಡ್ -19 ಖಚಿತಗೊಂಡಿರುವ ಸಾಧ್ಯತೆ ಇದೆ. ಆದರೆ ಎಲ್ಲರನ್ನು ಮನೆಗಳಿಗೆ ತೆರಳಲು ಅವಕಾಶ ನೀಡಿರುವುದರಿಂದ ಮತ್ತೆ ಅವರನ್ನು ಮನೆಗಳಿಂದ ಕರೆತಂದು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸುವುದು ಸವಾಲಿನ ಕೆಲಸವಾಗಿದೆ. ಭಾರೀ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿರುವ ಕೋವಿಡ್ ಆಸ್ಪತ್ರೆಗಳಿಗೆ ಸೋಂಕಿತರನ್ನು ದಾಖಲಿಸುವ ಕಾರ್ಯ ಒಂದು ದಿನದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಮನೆಗಳನ್ನು ಗುರುತಿಸುವುದೇ ಸಾಹಸವಾಗಿದೆ. ಕೆಲವರು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿದರೆ, ಕೆಲವರಿಗೆ ಸಿಗ್ನಲ್ ತಲುಪದೇ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಸ್ತುತ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್-19 ಪ್ರಕರಣಗಳ ಪಟ್ಟಿಯ ನಿರೀಕ್ಷೆಯಲ್ಲಿದೆ. ಈಗಾಗಲೇ ಕಂಗಾಲಾಗಿರುವ ಜನತೆ ಕೂಡ ಇಂದು ಬರಸಿಡಿಲಿನಂತೆ ಎರಗುವ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!