ಉಡುಪಿ: ಸಾಂಕ್ರಾಮಿಕ ನೋವೆಲ್ ಕೊರೋನಾ ವೈರಸ್ ಉಡುಪಿ ಜಿಲ್ಲೆಯನ್ನು ಹೈರಾಣಾಗಿಸುತ್ತಿದೆ. ತಲ್ಲಣಕಾರಿ ಸಂಗತಿ ಎಂದರೆ, ಕೋವಿಡ್ ಪ್ರಕರಣಗಳು ಶರವೇಗದಲ್ಲಿ ಏರಿಕೆಯಾಗುತ್ತಿವೆ.
ಕೋವಿಡ್ -19 ಪ್ರಕರಣಗಳು ದ್ವಿಗುಣಗೊಳ್ಳಲು ನಿನ್ನೆವರೆಗೆ ಐದು ದಿನಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ದ್ವಿಗುಣಗೊಳ್ಳುವ ಅವಧಿ ಎರಡು ದಿನಕ್ಕೆ ಇಳಿದಿದೆ. ರಾಜ್ಯದಲ್ಲಿ ಸೋಂಕಿನ ಖಚಿತ ಪ್ರಕರಣಗಳು ದ್ವಿಗುಣವಾಗುವ ಅವಧಿ 11 ದಿನಗಳಾಗಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಈ ಸಮಯ ತೀರಾ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮಂಗಳವಾರ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 150 ಕೋವಿಡ್ ಪ್ರಕರಣಗಳು ದೃಢಗೊಳ್ಳುವ ಮೂಲಕ ಜಿಲ್ಲೆಯ ಜನತೆ ಭಯ ಭೀತಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ 100 ಮಂದಿಯಲ್ಲಿ ಏಳು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಂದರೆ ಶೇ. 7ರಷ್ಟು ಸೋಂಕು ಪತ್ತೆಯಾಗುತ್ತಿದೆ. ಇದರಲ್ಲಿ ಉಡುಪಿ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ. ಕಳೆದ 10 ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 1ಲಕ್ಷ ಜನರಿಗೆ 2735 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಪರೀಕ್ಷೆಗೊಳಪಡುವವರ ಸಂಖ್ಯೆ ಕಡಿಮೆಯಾದರೂ ಸೋಂಕು ಕಾಣಿಸಿಕೊಳ್ಳುವ ಪ್ರಮಾಣ ಜಾಸ್ತಿಯಾಗಿದೆ.
ನಿನ್ನೆಯವರೆಗೆ ಐದು ದಿನಗಳ ಅವಧಿಯಲ್ಲಿ ರಾಜ್ಯದ ಸರಾಸರಿ ಸೋಂಕು ಹೆಚ್ಚಳ ದರ ಶೇ. 8.4 ಆಗಿದೆ. ಇದರಲ್ಲಿ ಉಡುಪಿ ಎರಡನೇ ಸ್ಥಾನದಲ್ಲಿದ್ದು, ಶೇ. 22.4ರಷ್ಟು ಸೋಂಕು ಹೆಚ್ಚಳ ಕಂಡು ಬಂದಿದೆ ಎಂದು ಕೋವಿಡ್ -19 ಕರ್ನಾಟಕ ವಾರ್ ರೂಂನ ಮಾಹಿತಿ ತಿಳಿಸಿದೆ.