ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಮಿಕ ಕೋವಿಡ್-19 ವ್ಯಾಧಿಗೆ ತುತ್ತಾದವರಲ್ಲಿ ಶೇ. 73.82ರಷ್ಟು ಚೇತರಿಕೆ ಇದೆ. ಸೋಮವಾರ ಉಡುಪಿ ಜಿಲ್ಲೆಯ 103 ಜನರು ನೋವೆಲ್ ಕೊರೋನಾ ವೈರಸ್ ರೋಗದಿಂದ ಮುಕ್ತರಾಗಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 10,236 ಮಂದಿ ಸೋಂಕಿತರಲ್ಲಿ 7,557 ಮಂದಿ ಗುಣಮುಖರಾಗಿ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಸೋಮವಾರ ಐದು ಮಂದಿ ಕೊನೆಯುಸಿರೆಳೆಯುವ ಮೂಲಕ ಮೃತಪಟ್ಟವರ ಸಂಖ್ಯೆ 89ಕ್ಕೆ ತಲುಪಿದೆ. ಪ್ರಸಕ್ತ 2,590 ಮಂದಿಯಲ್ಲಿ ಕೊರೋನಾ ವೈರಸ್ ಸಕ್ರಿಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಒಂದು ದಿನದಲ್ಲಿ ಶೇ. 13.08 ಸೋಂಕು ಪತ್ತೆ
ಸೋಮವಾರ ಆರೋಗ್ಯ ಇಲಾಖೆಗೆ ಒಟ್ಟು 787 ವರದಿಗಳು ಲಭಿಸಿವೆ. ಇವುಗಳಲ್ಲಿ 103 ವರದಿಗಳು ಕೋವಿಡ್-19 ಪಾಸಿಟಿವ್ ಮತ್ತು 684 ವರದಿಗಳು ನೆಗೆಟಿವ್ ಆಗಿವೆ. ಅಂದರೆ ಪರೀಕ್ಷೆಗೊಳಪಟ್ಟವರಲ್ಲಿ ಶೇ. 13.08 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸ ಸೋಂಕಿತರಲ್ಲಿ 28 ಮಂದಿಯಲ್ಲಿ ರೋಗ ಲಕ್ಷಣಗಳಿವೆ. ಉಳಿದ 75 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲಿ 50, ಕುಂದಾಪುರ ತಾಲೂಕಿನಲ್ಲಿ 19 ಮತ್ತು ಕಾರ್ಕಳ ತಾಲೂಕಿನಲ್ಲಿ 26 ಮಂದಿಗೆ ವ್ಯಾಧಿ ಅಂಟಿದೆ. ಹೊರ ಜಿಲ್ಲೆಯ 8 ಮಂದಿ ಸೋಂಕಿತರಾಗಿದ್ದಾರೆ.
ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 55 ಪುರುಷರು ಮತ್ತು 48 ಮಹಿಳೆಯದ್ದಾರೆ. ಇವರಲ್ಲಿ 72 ಮಂದಿ ಮನೆ ಆರೈಕೆಯನ್ನು ಆಯ್ದುಕೊಂಡಿದ್ದಾರೆ. ಉಳಿದವರಿಗೆ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರ ಮತ್ತೆ 414 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರೂ ಸೇರಿ 957 ಜನರ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.