ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಿಂದ ಸಂಪರ್ಕಿತರಿಗೆ ವೈರಸ್ ಹರಡುವುದು ಹೆಚ್ಚುತ್ತಿದೆ. ಬುಧವಾರ 14 ಮಂದಿ ಪ್ರಾಥಮಿಕ ಸಂಪರ್ಕಿತರ ಸಹಿತ ಒಟ್ಟು 22 ಜನರಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 5 ಜನರಲ್ಲಿ, ಅಬುದಾಬಿ, ತೆಲಂಗಾಣ ಮತ್ತು ಬೆಂಗಳೂರಿನಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 14 ಮಂದಿ ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಪಾಸಿಟಿವ್ ಬಂದವರ ಸಂಪರ್ಕಿತರು. ಇವರಲ್ಲಿ 6 ಮಂದಿ ಜೂ. 27ರಂದು ಸೋಂಕು ದೃಢಪಟ್ಟ 24 ಮತ್ತು 26ರ ಹರೆಯದ ಸಹೋದರ ಸಂಪರ್ಕಕ್ಕೆ ಬಂದಿದ್ದಾರೆ. ಕಾಪು, ಹೆಬ್ರಿ, ತಲ್ಲೂರು, ಬೈಂದೂರು ಮೊದಲಾದೆಡೆ ಸೋಂಕಿತರು ಪತ್ತೆಯಾಗಿದ್ದಾರೆ.
ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ ಒಂದು ವರ್ಷದ ಮಗು, 11 ಮಂದಿ ಪುರುಷರು ಮತ್ತು 10 ಮಹಿಳೆಯರು ಸೇರಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 5, ಕುಂದಾಪುರದ 11 ಮತ್ತು ಕಾರ್ಕಳ ತಾಲೂಕಿನ 11 ಜನರಿದ್ದಾರೆ. ಎಲ್ಲರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.