ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಾಮಿಕ ಕೋವಿಡ್-19 ವ್ಯಾಧಿಯ ಪ್ರಮಾಣ ಗಣನೀಯವಾಗಿ ತಗ್ಗುತ್ತಿದ್ದು, 107 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 500ರೊಳಗಿದೆ. ಮಂಗಳವಾರ ಜಿಲ್ಲೆಯಲ್ಲಿ 463 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜುಲೈ 18ರ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಸೋಂಕು ಪ್ರಮಾಣ ಅತ್ಯಂತ ಕಡಿಮೆ ಮಟ್ಟ ತಲುಪಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಂಕಿನ ನಾಲ್ಕು ಪಟ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ 20 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟರೆ, 109 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 21,985 ಮಂದಿಗೆ ಸೋಂಕು ಪತ್ತೆಯಾಗಿತ್ತು. ಇವರಲ್ಲಿ 21,341 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಮರಣ ಪ್ರಮಾಣವೂ ಕಡಿಮೆಯಾಗಿದೆ. ಇಲ್ಲಿಯವರೆಗೆ 183 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಕೋವಿಡ್ ಸೋಂಕು ದೃಢಪಡುವ ದರ ಶೇ. 20-25ರಷ್ಟಿತ್ತು. ನೂರು ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದರೆ, ಅವರಲ್ಲಿ 20-25 ಜನರಿಗೆ ಸೋಂಕು ದೃಢವಾಗುತ್ತಿತ್ತು. ಸೆಪ್ಟೆಂಬರ್ನಲ್ಲಿ ಅದು ಶೇ. 15-20ಕ್ಕಿಳಿದರೆ, ಅಕ್ಟೋಬರ್ನಲ್ಲಿ ಶೇ. 10ರ ಆಸುಪಾಸಿನಲ್ಲಿತ್ತು. ಇದೀಗ ಒಂದು ವಾರದಲ್ಲಿ ಶೇ. 4ಕ್ಕಿಂತ ಕಡಿಮೆಯಾಗಿದೆ. ಸೋಮವಾರ 1,576 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 20 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಅಂದರೆ ಪಾಸಿಟಿವಿಟಿ ದರ ಶೇ 1.5ಕ್ಕಿಂತಲೂ ಕಡಿಮೆಯಾಗಿದೆ.