ಉಡುಪಿ: ಜಿಲ್ಲೆಯಲ್ಲಿ ಕೋವಿಡ್ಗೆ ಮತ್ತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಕೋವಿಡ್ -19 ನಿಂದಲೇ ಒಬ್ಬರು ಅಸುನೀಗಿದ್ದಾರೆ.
ಈವರೆಗೆ ಇತರ ಕಾಯಿಲೆಯಿಂದ ಸತ್ತವರಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರ್ಕಳ ತಾಲೂಕಿನ 60ರ ಹರೆಯದ ವ್ಯಕ್ತಿ ನೋವೆಲ್ ಕೊರೋನಾ ವೈರಸ್ ದಾಳಿಯಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಭಾನುವಾರ ರಾತ್ರಿ ಓರ್ವ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಶನಿವಾರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಕುಂದಾಪುರದ ಮಹಿಳೆಯನ್ನು ಬ್ರಹ್ಮಾವರದ ಆಸ್ಪತ್ರೆಗೆ ಕರೆತರುವಾಗ ಸಾವು ಸಂಭವಿಸಿದೆ. ಇನ್ನೊಬ್ಬರು ನೇಜಾರಿನ ವ್ಯಕ್ತಿ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿಯೂ ವೈರಸ್ ಇರುವುದು ದೃಢಪಟ್ಟಿದೆ.
ಕುಂದಾಪುರ ತಾಲೂಕು ಶಂಕರನಾರಾಯಣದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಉಡುಪಿಗೆ ಕರೆತರುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ. ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಸೋಂಕಿತರಾಗಿರುವುದು ಖಚಿತವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.