ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಮಿಕ ಕೋವಿಡ್-19 ಸೋಂಕಿಗೆ ತುತ್ತಾದವರಲ್ಲಿ ಚೇತರಿಕೆ ಪ್ರಮಾಣ ಶೇ. 75.11ರಷ್ಟು ಇದೆ. ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ 8,197 ಜನರು ಗುಣಮುಖರಾಗಿದ್ದಾರೆ.
ಗುರುವಾರ 214 ಜನರು ನೋವೆಲ್ ಕೊರೋನಾ ವೈರಸ್ ರೋಗದಿಂದ ಮುಕ್ತರಾಗಿದ್ದಾರೆ. ಇವರಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರು 35 ಮಂದಿ ಮಾತ್ರ. ಉಳಿದ 179 ಜನರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 10,913 ಮಂದಿ ಸೋಂಕಿತರಲ್ಲಿ 8197 ಜನರು ಗುಣಮುಖರಾಗಿ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಗುರುವಾರ ವೃದ್ಧರೊಬ್ಬರು ಕೊನೆಯುಸಿರೆಳೆಯುವ ಮೂಲಕ ಮೃತಪಟ್ಟವರ ಸಂಖ್ಯೆ 93ಕ್ಕೆ ತಲುಪಿದೆ. ಪ್ರಸಕ್ತ 2,623 ಜನರಲ್ಲಿ ಕೊರೋನಾ ವೈರಸ್ ಸಕ್ರಿಯವಾಗಿದೆ.
24ತಾಸುಗಳಲ್ಲಿ ಶೇ. 22.79ರಷ್ಟು ಸೋಂಕು ದೃಢ
ಗುರುವಾರ ಆರೋಗ್ಯ ಇಲಾಖೆಗೆ ಒಟ್ಟು 917 ವರದಿಗಳು ಲಭಿಸಿವೆ. ಇವುಗಳಲ್ಲಿ 209 ವರದಿಗಳು ಕೋವಿಡ್-19 ಪಾಸಿಟಿವ್ ಮತ್ತು 708 ವರದಿಗಳು ನೆಗೆಟಿವ್ ಆಗಿವೆ. ಅಂದರೆ ಪರೀಕ್ಷೆಗೊಳಪಟ್ಟವರಲ್ಲಿ ಶೇ. 22.79ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸ ಸೋಂಕಿತರಲ್ಲಿ 79 ಮಂದಿಯಲ್ಲಿ ರೋಗ ಲಕ್ಷಣಗಳಿವೆ. ಉಳಿದ 130 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲಿ 106, ಕುಂದಾಪುರ ತಾಲೂಕಿನಲ್ಲಿ 50 ಮತ್ತು ಕಾರ್ಕಳ ತಾಲೂಕಿನಲ್ಲಿ 45 ಮಂದಿಗೆ ವ್ಯಾಧಿ ಅಂಟಿದೆ. ಹೊರ ಜಿಲ್ಲೆಯ 8 ಮಂದಿ ಸೋಂಕಿತರಾಗಿದ್ದಾರೆ.
ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 114 ಪುರುಷರು ಮತ್ತು 95 ಮಹಿಳೆಯದ್ದಾರೆ. ಇವರಲ್ಲಿ 129 ಮಂದಿ ಮನೆ ಆರೈಕೆಯನ್ನು ಆಯ್ದುಕೊಂಡಿದ್ದಾರೆ. ಉಳಿದವರಿಗೆ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಗುರುವಾರ ಮತ್ತೆ 969 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರಲ್ಲಿ 783 ಜನರ ವರದಿ ಬರಲು ಬಾಕಿ ಇದೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.