Wednesday, August 10, 2022

Latest Posts

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಸಿದ್ಧಗೊಳಿಸಲಾಗಿದೆ ಲಸಿಕಾ ಕೊಠಡಿ

ದಿಗಂತ ವರದಿ, ಉಡುಪಿ:

ಸಾಂಕ್ರಾಮಿಕ ಕೋವಿಡ್-19 ವ್ಯಾಧಿಗೆ ಲಸಿಕೆ ಕಂಡು ಹುಡುಕಲಾಗುತ್ತಿದೆ. ವಿವಿಧ ಹಂತಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.
ನಗರದ ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಿರ್ಮಿಸಿರುವ ಈ ಲಸಿಕಾ ಸಂಗ್ರಹ ಕೊಠಡಿಯಲ್ಲಿ ಸುಮಾರು 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡಲು ಸಾಧ್ಯವಿದೆ. ಈ ಕೊಠಡಿಯು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ.
ಇಡೀ ವಿಶ್ವವನ್ನೇ ಬಿಡದೇ ಕಾಡುತ್ತಿರುವ, ಈವರೆಗೆ ಕೋಟ್ಯಂತರ ಜನರನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೋವಿಡ್-19 ಸೋಂಕಿಗೆ ಕಡಿವಾಣ ಹಾಕಲು ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಲಸಿಕೆಯ ಅಂತಿಮ ಸಿದ್ಧತೆಯಲ್ಲಿದ್ದು, ಶೀಘ್ರದಲ್ಲಿ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆ ಇದೆ.
ವಿಶ್ವದಲ್ಲಿ 248ಸಂಸ್ಥೆಗಳಿಂದ ಲಸಿಕೆಗೆ ಪ್ರಯತ್ನ
ವಿಶ್ವದಾದ್ಯಂತ 248ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಮೊದಲ ಹಂತ, 16 ಲಸಿಕೆಗಳು ಅರ್ಧ, 2 ಲಸಿಕೆಗಳು ಎರಡನೇ ಹಂತ ಮತ್ತು 10 ಲಸಿಕೆಗಳು ಮೂರನೇ ಹಂತದಲ್ಲಿ ಪರೀಕ್ಷೆಗೆ ಒಳಪಟ್ಟಿವೆ. ಆದರೆ ಇದುವರೆಗೆ ಯಾವುದೇ ಲಸಿಕೆಗೆ ಅನುಮತಿ ದೊರೆತಿಲ್ಲ. ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ.
ಅಧಿಕಾರಿ-ಸಿಬ್ಬಂದಿಗೆ ಮೊದಲು ಲಸಿಕೆ
ಕೇಂದ್ರ ಸರಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ ನೀಡಬೇಕಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್‌ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಡೇಟಾಬೇಸ್‌ನ್ನು ಶೀಘ್ರದಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂಬಂಧ ವಿಶೇಷ ಗಮನಹರಿಸಿ, ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಸಾಗಾಟದಿಂದ ವಿತರಣೆಯವರೆಗೆ ಸಂಪೂರ್ಣ ಸಜ್ಜು!
ಕೋವಿಡ್ ಲಸಿಕೆ ತಯಾರಿಕಾ ಘಟಕದಿಂದ ಆರಂಭಗೊಂಡು ಸಾಗಾಟ, ಲಸಿಕಾ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ಲಸಿಕೆ ವಿತರಣಾ ಸ್ಥಳಕ್ಕೆ ತಲುಪುವವರೆಗೆ ಲಸಿಕೆಗೆ 2-8 ಡಿಗ್ರಿ ತಾಪಮಾನ ಕಾಪಾಡುವ ಅಗತ್ಯವಿದೆ. ಯಾವುದೇ ಸಂದರ್ಭದಲ್ಲಿ ಲಸಿಕೆಯ ತಾಪಮಾನ ವ್ಯತ್ಯಯವಾಗದಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಟಕ್ಕೆ 1324 ವಾಹನಗಳು, 9370 ಐಸ್ ಪ್ಯಾಕ್‌ಗಳ ವ್ಯವಸ್ಥೆ ಮಾಡದ್ದು, ಲಸಿಕೆ ನೀಡಲು ನುರಿತ ಸಿಬ್ಬಂದಿಯನ್ನೂ ಗುರುತಿಸಲಾಗಿದೆ.
ಡಾ. ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss