ಉಡುಪಿ: ಇಷ್ಟು ದಿನ ಜಿಲ್ಲೆಯಲ್ಲಿ ಕ್ವಾರಂಟೈನ್ ಆತಂಕವಿದ್ದರೆ, ಇನ್ನು ಮುಂದೆ ಕಂಟೈನ್ಮೆಂಟ್ ಆತಂಕ ಶುರುವಾಗಿದೆ.
ಮಹಾರಾಷ್ಟ್ರದಿಂದ ಬಂದು ಏಳು ದಿನ ದಿಗ್ಬಂಧನ ಅವಧಿ ಮುಗಿಸಿ ಮನೆಗೆ ಹೋದವರು ಮನೆಗಳಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ ಸೋಂಕು ದೃಢಪಟ್ಟ 13 ಮಂದಿ ಮನೆಗಳಲ್ಲಿದ್ದು, ಅವರನ್ನು ಅವರ ಮನೆಗಳಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೂಚನೆಯಂತೆ ಏಳು ದಿನ ದಿಗ್ಬಂಧನ ವಾಸ ಮುಗಿಸಿದವರನ್ನು 2-3 ದಿನಗಳ ಹಿಂದೆ ಮನೆಗೆ ಕಳುಹಿಸಲಾಗಿತ್ತು. ಇಂದು ಹಲವು ಮಂದಿಯ ಕೋವಿಡ್ ವರದಿಗಳು ಆರೋಗ್ಯ ಇಲಾಖೆಯ ಕೈ ಸೇರಿದ್ದು, ಈ ಪೈಕಿ 13 ಮಂದಿಗೆ ಕೊರೋನಾ ವೈರಸ್ ಇರುವುದು ಕಂಡು ಖಚಿತವಾಗಿದೆ. ನೆಮ್ಮದಿಯಾಗಿ ಮನೆ ಸೇರಿದ್ದ 13 ಮಂದಿಯನ್ನು ಗುರುತಿಸಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದೆ.
ನೋವೆಲ್ ಕೊರೋನಾ ವೈರಸ್ ಬಾಧಿತರು ಕುಟುಂಬಸ್ಥರ ಜೊತೆ ಮನೆಯಲ್ಲೇ ಇರುವುದರಿಂದ ಜೊತೆಗಿದ್ದವರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಸೋಂಕಿತರ ಮನೆಯ ಪರಿಸರ ನಿಯಂತ್ರಿತ ವಲಯವನ್ನಾಗಿ ಮಾಡಬೇಕಾ? ಎಂಬ ಗೊಂದಲ ಜಿಲ್ಲಾಡಳಿತಕ್ಕೆ ಇದೆ.
ಗಂಟಲ ದ್ರವ ಮಾದರಿ ತೆಗೆದು ವರದಿ ಬರುವ ಮೊದಲೇ ಮನೆಗೆ ಕಳುಹಿಸಿರುವ ಸರಕಾರದ ಎಡವಟ್ಟು ನಿರ್ಧಾರದಿಂದ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ನಿಯಂತ್ರಿತ ವಲಯಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ನಿಯಂತ್ರಿತ ವಲಯ ಘೋಷಣೆಯಾದರೆ ಮುಂದಿನ 28 ದಿನಗಳ ಕಾಲ ಆ ವಲಯದಲ್ಲಿ ಜನರ ಚಟುವಟಿಕೆಗಳ ಮೇಲೆ ಕಡಿವಾಣ ಬೀಳಲಿದೆ.