Friday, August 12, 2022

Latest Posts

ಉಡುಪಿ ಜಿಲ್ಲೆಯಲ್ಲಿ ಗುರುವಾರ 217 ಜನರಲ್ಲಿ ಕೊರೋನಾ ವೈರಸ್ ಪತ್ತೆ, 85 ಮಂದಿ ಗುಣಮುಖ, ಬಿಡುಗಡೆ

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ 217 ಜನರಲ್ಲಿ ನೋವೆಲ್ ಕೊರೋನಾ ವೈರಸ್ ಪತ್ತೆಯಾಗಿದ್ದು, ಉಳಿದ 1685 ಜನರಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ 90 ಮಂದಿ ಉಡುಪಿ ತಾಲೂಕಿನವರು, 81 ಜನರು ಕುಂದಾಪುರ ಮತ್ತು 44 ಜನ ಕಾರ್ಕಳ ತಾಲೂಕಿನವರಾಗಿದ್ದಾರೆ. ಇಬ್ಬರು ಹೊರ ಜಿಲ್ಲೆಯವರಿದ್ದಾರೆ. ಇವರಲ್ಲಿ ಸಂಪರ್ಕದಿಂದ 93, ಶೀತಜ್ವರ ಇರುವ 62, ತೀವ್ರ ಉಸಿರಾಟದ ತೊಂದರೆಯಿರುವ 9 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ 85 ಜನರಲ್ಲಿ ರೋಗ ಲಕ್ಷಣಗಳಿದ್ದರೆ, ಉಳಿದ 132 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ ಎಂದು ಡಿಎಚ್‌ಒ ವಿವರಿಸಿದ್ದಾರೆ.
ಕೋವಿಡ್-19 ಸೋಂಕಿಗೆ ತುತ್ತಾದವರ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ 5353ಕ್ಕೆ ತಲುಪಿದೆ. ಇವರಲ್ಲಿ 3157 ಜನರು ಸೋಂಕು ಮುಕ್ತರಾಗಿದ್ದಾರೆ. ಇವರಲ್ಲಿ ಗುರುವಾರ 85 ಜನರು ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆ ಹಾಗೂ ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲೀಗ 2153 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 1099 ಜನರು ಮನೆ ಆರೈಕೆಯಲ್ಲಿದ್ದಾರೆ.
ಮತ್ತೆ ಆರು ಮಂದಿ ಸೋಂಕಿತರು ಮೃತ್ಯು
ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೆ ಆರು ಮಂದಿ ಕೋವಿಡ್-19 ಸೋಂಕು ಬಾಧಿತರು ಕೊನೆಯುಸಿರೆಳೆದಿದ್ದಾರೆ. ಮೃತರೆಲ್ಲರೂ ಪುರುಷರಾಗಿದ್ದು, ಬಹುವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಕುಂದಾಪುರ ತಾಲೂಕಿನ 82ರ ಹರೆಯದ ವೃದ್ಧಘಿ, 52ವರ್ಷ ಪ್ರಾಯದ ವ್ಯಕ್ತಿ, ಕಾರ್ಕಳ ತಾಲೂಕಿನ 72ರ ಹರೆಯದ ವೃದ್ಧ, ಉಡುಪಿ ತಾಲೂಕಿನ 55ರ ಹರೆಯದ ವ್ಯಕ್ತಿ, 70 ವರ್ಷ ಪ್ರಾಯದ ವೃದ್ಧ ಮತ್ತು 36ರ ಹರೆಯದ ಯುವಕ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 50 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.
ಹೊಸದಾಗಿ 1991 ಮಂದಿಯ ಗಂಟಲ ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಪಡೆಯಲಾಗಿದೆ. ಇವರಲ್ಲಿ 1229 ಜನರ ವರದಿ ಬರಲು ಬಾಕಿ ಇದೆ. ಇಲ್ಲಿಯವರೆಗೆ 40,044 ಜನರ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇವರಲ್ಲಿ 33,455 ಜನರಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ. ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss