ಹೊಸ ದಿಗಂತ ವರದಿ, ಉಡುಪಿ:
ಉಡುಪಿ ಜಿಲ್ಲೆಯಲ್ಲಿ ಈ ತಿಂಗಳ 22ರಂದು ನಡೆಯಲಿರುವ ಗ್ರಾ.ಪಂ. ಮೊದಲ ಹಂತದ ಚುನಾವಣೆಗೆ ಸಂಬಂಧಿಸಿ 67 ಪಂಚಾಯತ್ಗಳಲ್ಲಿ ನಾಮಪತ್ರ ಸಲ್ಲಿಸಿ ಅಖೈರುಗೊಂಡಿದೆ. ಒಟ್ಟು 1122 ಸ್ಥಾನಗಳಿಗೆ 2,962 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲ ಹಂತದಲ್ಲಿ 9 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ.
ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣಾ ಮೊದಲ ಹಂತಕ್ಕೆ ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್ಗಳ 329 ಸ್ಥಾನಗಳಿಗೆ 803 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೆಬ್ರಿ ತಾಲೂಕಿನ 9 ಗ್ರಾ.ಪಂ.ಗಳ 122 ಸದಸ್ಯ ಸ್ಥಾನಗಳಿಗೆ 338 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬೈಂದೂರು ತಾಲೂಕಿನ 15 ಪಂಚಾಯತ್ಗಳ 259 ಸ್ಥಾನಗಳಿಗೆ 787 ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ. ಬ್ರಹ್ಮಾವರ ತಾಲೂಕಿನ 27 ಪಂಚಾಯಿತಿಗಳ 403 ಸ್ಥಾನಗಳಿಗೆ 1,034 ನಾಮಪತ್ರಗಳು ಸಲ್ಲಿಕೆಯಾಗಿವೆ. ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮ ಪಂಚಾಯತ್ನ 9 ಸ್ಥಾನಗಳಿಗೆ ಯಾರಿಂದಲೂ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ.
ಸಲ್ಲಿಕೆಯಾದ ಒಟ್ಟು 2,962 ನಾಮಪತ್ರಗಳ ಪರಿಶೀಲನೆ ಶನಿವಾರ ನಡೆದಿದೆ. ಇವುಗಳಲ್ಲಿ 2,868 ನಾಮಪತ್ರಗಳು ಸಮರ್ಪಕವಾಗಿದ್ದು, ಸಿಂಧುವಾಗಿವೆ. ಉಳಿದ 38 ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ಹಿಂಪಡೆಯಲು ಡಿ. 14 ಕೊನೆಯ ದಿನವಾಗಿದ್ದು, ಡಿ.22ರಂದು ಮತದಾನ ನಡೆಯಲಿದೆ.
ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಿದ್ದು, ಡಿ.16 ಉಮೇದುವಾರಿಕೆ ಸಲ್ಲಿಸಲು ಕೊನೆಯ ದಿನ. ಡಿ. 27ರಂದು ಚುನಾವಣೆ ನಡೆಯಲಿದ್ದು, 30ರಂದು ಫಲಿತಾಂಶ ಪ್ರಕಟವಾಗಲಿದೆ.