ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ 99 ಮಂದಿ ಪುರುಷರು, 74 ಜನ ಮಹಿಳೆಯರಿದ್ದಾರೆ. ಶೀತ ಜ್ವರವಿರುವ 73 ಮಂದಿಗೆ ಸೋಂಕು ಕಾಣಿಸಿಕೊಂಡರೆ, ಸಂಪರ್ಕದಿಂದ 46 ಜನರಿಗೆ ಸೋಂಕು ಅಂಟಿದೆ. ಸೋಂಕಿತರಲ್ಲಿ 51 ಜನ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಉಡುಪಿ ತಾಲೂಕಿನ 76, ಕುಂದಾಪುರದ 57 ಮತ್ತು ಕಾರ್ಕಳದ 39 ಜನರಿಗೆ ಸೋಂಕು ತಗುಲಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5143ಕ್ಕೆ ತಲುಪಿದೆ. ಇವರಲ್ಲಿ 3072 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ 239 ಜನರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರಲ್ಲಿ ಬುಧವಾರ 124 ಜನರು ಆಸ್ಪತ್ರೆ ಮತು ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 44 ಜನರು ಮೃತಪಟ್ಟಿದ್ದಾರೆ. ಪ್ರಸಕ್ತ ಜಿಲ್ಲೆಯಲ್ಲಿ 2027 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದ್ದು, 1071 ಜನರು ಮನೆ ಆರೈಕೆಯಲ್ಲಿದ್ದಾರೆಂದು ಡಿಎಚ್ಒ ವಿವರಿಸಿದ್ದಾರೆ.
ಬುಧವಾರ ಮತ್ತೆ 1853 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಿದ್ದು, ಇವರಲ್ಲಿ 1140 ವರದಿಗಳು ಬರಬೇಕಿದೆ. ಹೊಸದಾಗಿ ಆರೋಗ್ಯ ಇಲಾಖೆಗೆ ಲಭಿಸಿದ 1244 ವರದಿಗಳು ನೆಗೆಟಿವ್ ಆಗಿವೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.