Wednesday, August 17, 2022

Latest Posts

ಉಡುಪಿ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ: ಸಿಡಿಲಾಘಾತಕ್ಕೆ ಪಡುಏಣಗುಡ್ಡೆಯ ನಿವಾಸಿ ಯುವಕ ಬಲಿ

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಭಾರೀ ಗುಡುಗು-ಸಿಡಿಲು ಸಹಿತ ಗಾಳಿ ಮಳೆ ಸುರಿದಿದ್ದು, ಯುವಕನೋರ್ವ ಸಿಡಿಲಾಘಾತಕ್ಕೆ ಬಲಿಯಾಗಿದ್ದಾರೆ.
ಕಾಪು ತಾಲೂಕಿನ ಕಟಪಾಡಿ ಜೆ.ಎನ್. ನಗರದ ಪಡುಏಣಗುಡ್ಡೆಯ ನಿವಾಸಿ ಭರತ್ (22) ಮೃತಪಟ್ಟ ಯುವಕ. ಮಳೆ ಬರುವಾಗ ಭರತ್ ಮನೆಯೊಳಗೆ ಕುಳಿತಿದ್ದು, ಅಲ್ಲಿಯೇ ಸಿಡಿಲು ಬಡಿದಿದೆ. ಸಿಡಿಲಿನ ಆಘಾತಕ್ಕೆ ಕುಸಿದು ಬಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ‌ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾರಿ ಹೋದ ಚೆಕ್ ಪೋಸ್ಟ್ ತಗಡು ಚಪ್ಪರ
ಪಡುಬಿದ್ರೆ ಸುತ್ತಮುತ್ತ ಭಾರೀ ಗಾಳಿ ಬೀಸಿದ್ದು, ಉಡುಪಿ ಜಿಲ್ಲಾ ಗಡಿ ಪ್ರದೇಶ ಹೆಜಮಾಡಿಯಲ್ಲಿ ಚೆಕ್‌ಪೋಸ್ಟ್‌ಗೆ ಹಾಕಲಾಗಿದ್ದ ತಗಡು ಶೀಟ್‌ಗಳು, ಶಾಮಿಯಾನ ಹಾರಿಹೋಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು, ಕೆಲಕಾಲ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರದಾಡುವಂತಾಗಿತ್ತು. ಇದರಿಂದ ಕರ್ತವ್ಯನಿರತ ಸಿಬ್ಬಂದಿಗೆ ತೀವ್ರ ತೊಂದರೆ ಉಂಟಾಯಿತು. ಸ್ಥಳಕ್ಕೆ ಕಾಪು ತಹಶೀಲ್ದಾರ್ ಇಸಾಕ್ ಮೊಹಮ್ಮದ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಉಡುಪಿ ನಗರ, ಮಣಿಪಾಲ, ಮಲ್ಪೆ, ಬ್ರಹ್ಮಾವರ ಸುತ್ತಮುತ್ತಲ ಪರಿಸರದಲ್ಲಿಯೂ ಕೆಲ ಹೊತ್ತು ಉತ್ತಮ ಮಳೆ ಸುರಿದಿದೆ. ಜೊತೆಗೆ ಗುಡುಗು-ಸಿಡಿಲಿನೊಂದಿಗೆ ಬಲವಾಗಿ ಗಾಳಿ ಬೀಸಿದೆ. ಪರಿಣಾಮ ಕೆಲಕಾಲ ವಿದ್ಯುತ್ ಕಡಿತಗೊಂಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!