ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ| ಜಿಲ್ಲೆಯಲ್ಲಿ ರೂಟ್ ಸರ್ವೆ, ಬೆಳಗ್ಗೆ 7ರಿಂದ ಸಂಜೆಯ 7ರವರೆಗೆ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟಕ್ಕೆ ಅವಕಾಶ

ಉಡುಪಿ: ಹಸಿರು ವಲಯದಲ್ಲಿ ಬಸ್ಸನ್ನು ಓಡಿಸಬೇಕೆಂಬ ಸೂಚನೆ ಸರಕಾರ ಕೊಟ್ಟಿದೆ. ಆದ್ದರಿಂದ ಮೇ 4ರಿಂದ ಜಿಲ್ಲೆಯಲ್ಲಿ ರೂಟ್ ಸರ್ವೆ ನಡೆಸಲಾಗುತ್ತದೆ. ಅದರ ಪ್ರಕಾರ ಬೆಳಗ್ಗೆ 7ರಿಂದ ಸಂಜೆಯ 7ರವರೆಗೆ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.
’ಹೊಸದಿಗಂತ’ದೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆದು ಮಾತನಾಡಿದ್ದೇವೆ. ಯಾವ ಯಾವ ಮಾರ್ಗಗಳಲ್ಲಿ ಬಸ್ಸುಗಳ ಅಗತ್ಯವಿದೆ. ಅವುಗಳ ಸರ್ವೆ ಮಾಡಿ ತಿಳಿಸಬೇಕು. ಅಂತಹ ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸುವ ವ್ಯವಸ್ಥೆ ಮಾಡಬಹುದು ಎಂದು ಸೂಚನೆ ಕೊಟ್ಟಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮಾರ್ಗಗಳ ಸರ್ವೆ ಮಾಡುತ್ತಾರೆ ಎಂದರು.
ಈಗಾಗಲೇ ಫ್ಯಾಕ್ಟರಿಗಳಿಗೆ ಅವರದ್ದೇ ಸ್ವಂತ ಬಸ್ಸು, ವಾಹನಗಳಲ್ಲಿ ಶೇ. 40ರಷ್ಟು ಪ್ರಯಾಣಿಕರನ್ನು ಕರೆದೊಯ್ಯಲು ಆದೇಶವನ್ನು ಮಾಡಿದೆ. ಹಾಗಾಗಿ ಫ್ಯಾಕ್ಟರಿಗಳ ಮಾಲೀಕರು, ಬಿಲ್ಡರ್‌ಗಳು ಅವರ ಫ್ಯಾಕ್ಟರಿ ಮತ್ತು ಸೈಟಿಗೆ ಕಾರ್ಮಿಕರನ್ನು ಕರೆದೊಯ್ಯಲು ಅವರ ಸ್ವಂತ ವಾಹನದಲ್ಲಿ ಶೇ. 40ರಷ್ಟು ಪ್ರಯಾಣಿಕರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಮನೆಗೆ ಹೋಗುವಾಗ ಪೊಲೀಸರ ಕಿರಿಕಿರಿ ಇಲ್ಲ
ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ 11ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಮಾಡಲು ಅವಕಾಶ ಇದ್ದಾಗಲೂ ಅತ್ಯಂತ ಶಿಸ್ತಿನಿಂದ ಲಾಕ್‌ಡೌನ್ ಪಾಲನೆ ಮಾಡಿದ್ದನ್ನು ನೋಡಿದ್ದೇವೆ. ಈಗ ಬಹುತೇಕ ಎಲ್ಲ ಅಂಗಡಿಗಳು ತೆರೆಯುವುದರಿಂದ ಸ್ವಲ್ಪ ಸಮಯ ಹೆಚ್ಚು ಬೇಕು ಎನ್ನುವ ಕಾರಣಕ್ಕೆ ಬೆಳಗ್ಗೆ 7ರಿಂದ ಮಧ್ಯಾಹ್ನ 1ಗಂಟೆಯವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮನೆಗೆ ಹೋಗುವುದಕ್ಕೆ ಸಂಜೆ 5ರಿಂದ 7ಗಂಟೆಯವರೆಗೆ ಯಾರೂ ಕಿರಿಕಿರಿ ಮಾಡಬಾರದು ಎಂದು ಈಗಾಗಲೇ ಎಸ್ಪಿ ಅವರಲ್ಲಿ ಮಾತನಾಡಲಾಗಿದೆ ಎಂದು ಡಿಸಿ ಹೇಳಿದರು.
ಬ್ಯೂಟಿ ಪಾರ್ಲರ್, ಸಲೂನ್ ವಾರದ ಬಳಿಕ
ಸಲೂನ್, ಬ್ಯೂಟಿ ಪಾರ್ಲರ್, ಸ್ಪಾ ಇತ್ಯಾದಿಗಳಲ್ಲಿ ವ್ಯಕ್ತಿಗಳ ನಡುವೆ ತುಂಬ ಸಮೀಪದ ಸಂಪರ್ಕ ಬರುವುದರಿಂದ ಜಿಲ್ಲೆಯ ಎಲ್ಲ ಶಾಸಕರ ಸಭೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಹಾಗೂ ಉಸ್ತುವಾರಿ ಸಚಿವರ ಸೂಚನೆಯಂತೆ ಒಂದು ವಾರ ಕಾಲ ಅವುಗಳನ್ನು ತೆರೆಯುವುದಕ್ಕೆ ತಡೆಹಿಡಿಯಲು ನಿರ್ಧಾರ ಮಾಡಲಾಗಿದೆ. ಆ ಬಳಿಕ ಅವುಗಳನ್ನು ತೆರೆಯಲು ಅವಕಾಶವನ್ನು ಮಾಡಿಕೊಡುತ್ತೇವೆ ಎಂದು ಡಿಸಿ ಹೇಳಿದರು.
ಹಸಿರಲ್ಲಿದ್ದೇವೆಂದು ಮೈಮರೆಯುವಂತಿಲ್ಲ
ನಾವು ಹಸಿರು ವಲಯದಲ್ಲಿದ್ದೇವೆ ಎಂದು ಮೈಮರೆಯುವಂತಿಲ್ಲ. ಈಗಾಗಲೇ ಹಸಿರು ವಲಯದಲ್ಲಿರುವ ಜಿಲ್ಲೆಗಳು ಏಕಾಏಕಿ ಕೆಂಪು ವಲಯಕ್ಕೆ ಹೋಗಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಯಾರೂ ಮೈಮರೆಯಬಾರದು. ಯಾರಾದರೂ ಉಡುಪಿ ಜಿಲ್ಲೆಯ ಜನರು ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಲ್ಲಿದ್ದವರಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳಿದ್ದರೆ, ಅಂತಹವರು ದಯವಿಟ್ಟು ಉಡುಪಿ ಜಿಲ್ಲೆಗೆ ಬರಬಾರದು. ಬಂದು ಇಲ್ಲಿರುವ ಜನರಿಗೆ ತೊಂದರೆ ಮಾಡಬಾರದು ಎಂದು ಜಿ. ಜಗದೀಶ ಮನವಿ ಮಾಡಿದರು.
ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರಿಗೆ ಆರೋಗ್ಯ ತಪಾಸಣೆ ಮಾಡಿಯೇ ನಾವು ಅವರನ್ನು ಬಿಡಲು ವ್ಯವಸ್ಥೆ ಮಾಡುತ್ತಿದ್ದೇವೆ. ಹಾಗಾಗಿ ಯಾವುದೇ ತೊಂದರೆಯಾಗುವುದಿಲ್ಲ. ಹೊರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಸರಕಾರಿ ದಿಗ್ಬಂಧನದಲ್ಲಿರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss