Wednesday, July 6, 2022

Latest Posts

ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ: ಆರೆಂಜ್ ಅಲರ್ಟ್ ಘೋಷಣೆ

ಉಡುಪಿ: ರಾಜ್ಯ ಹವಾಮಾನ ಇಲಾಖೆಯು ಉಡುಪಿ ಜಿಲ್ಲೆಯಲ್ಲಿ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದ್ದು, ಬಹುತೇಕ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಹಗಲಿಡೀ ಮಳೆಯ ಪ್ರಮಾಣ ಕಡಿಮೆಯಾಗಿತ್ತು.
ಉಡುಪಿ, ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ತಾಲೂಕುಗಳಲ್ಲಿ ಬೆಳಗ್ಗೆ ಮೋಡದ ವಾತಾವರಣದೊಂದಿಗೆ ಕೆಲ ಕಾಲ ಮಳೆ ಸುರಿದಿದ್ದರೂ ನಂತರ ಬಿಡುವು ನೀಡಿತ್ತು. ಆಗಾಗ್ಗೆ ದಟ್ಟವಾಗಿ ಕಾರ್ಮೋಡ ಕವಿದರೂ ನಿರೀಕ್ಷೆ ಮಳೆ ಸುರಿಯಲಿಲ್ಲ. ಆಗಾಗ್ಗೆ ಬಲವಾಗಿ ಗಾಳಿಯೂ ಬೀಸುತ್ತಿತ್ತು. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರವೂ ಜಾಸ್ತಿಯಾಗಿತ್ತು.
ಜಿಲ್ಲೆಯಲ್ಲಿ ಸರಾಸರಿ 99 ಮಿ.ಮೀ. ಮಳೆ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 99 ಮಿ.ಮೀ. ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ 136.5 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 61.66 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 95ಮಿ.ಮೀ. ಮಳೆ ಬಿದ್ದಿದೆ. ಇಂದು (ಆ. 18) ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ.
2ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿ
ಮಳೆಗೆ ಜಿಲ್ಲೆಯಲ್ಲಿ ಐದು ಮನೆಗಳಿಗೆ ಹಾಗೂ ಒಂದು ಅಂಗಡಿಗೆ ಹಾನಿಯಾಗಿದೆ. ಇದರಿಂದ 2ಲಕ್ಷ ರೂ. ನಷ್ಟವಾಗಿದೆ. ಉಡುಪಿ ತಾಲೂಕಿನ ಕುತ್ಪಾಡಿ ಗ್ರಾಮದ ಸಂಕಿ ಅವರ ಮನೆ ಹಾನಿಯಾಗಿ 80ಸಾವಿರ ರೂ., ಕಾಪು ತಾಲೂಕಿನ ಪಾದೂರು ಗ್ರಾಮದ ಬಾಲಕೃಷ್ಣ ಮತ್ತು ಸುಜಾತ ಅವರ ಮನೆಗೆ 25ಸಾವಿರ ರೂ., ಕಳತ್ತೂರು ಗ್ರಾಮದ ಪ್ರಕಾಶ್ ನಾಯ್ಕ ಅವರ ಅಂಗಡಿ ಹಾನಿಯಾಗಿ 10ಸಾವಿರ ರೂ. ನಷ್ಟವಾಗಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಚಂದ್ರಕಲಾ ಅವರಿಗೆ 45ಸಾವಿರ ರೂ., ಕಾಲ್ತೋಡು ಗ್ರಾಮದ ಮಂಜು ಪೂಜಾರಿ ಅವರಿಗೆ 15ಸಾವಿರ ರೂ., ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ರಮೇಶ್ ಪೂಜಾರಿ ಅವರಿಗೆ 20ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss