ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ 172 ಜನರಲ್ಲಿ ಕೋವಿಡ್-19 ವ್ಯಾಧಿ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಗೆ ಲಭ್ಯವಾದ 941 ವರದಿಗಳು ನೆಗೆಟಿವ್ ಆಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ 64 ಜನರಿಗೆ ರೋಗ ಲಕ್ಷಣಗಳಿದ್ದರೆ, ಉಳಿದ 108 ಮಂದಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಇವರಲ್ಲಿ 91 ಪುರುಷರು ಮತ್ತು 81 ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನಲ್ಲಿ 107, ಕುಂದಾಪುರದಲ್ಲಿ 19 ಮತ್ತು ಕಾರ್ಕಳ ತಾಲೂಕಿನಲ್ಲಿ 37 ಜನರಿಗೆ ಸೋಂಕು ಅಂಟಿದೆ. ಹೊರ ಜಿಲ್ಲೆಯ 9 ಜನರಿಗೂ ವ್ಯಾಧಿ ತಗಲಿದೆ. ಸೋಂಕಿತರಲ್ಲಿ 104 ಜನರು ಮನೆ ಆರೈಕೆಯಲ್ಲಿದ್ದರೆ, ಉಳಿದವರನ್ನು ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ತುತ್ತಾದವರ ಸಂಖ್ಯೆ 11,259ಕ್ಕೆ ತಲುಪಿದೆ. ಇವರಲ್ಲಿ ಈಗಾಗಲೇ 8,603 ಮಂದಿ ಸೋಂಕು ಮುಕ್ತರಾಗಿದ್ದಾರೆ. ಶನಿವಾರ 219 ಮಂದಿ ಆಸ್ಪತ್ರೆ ಹಾಗೂ ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 2561 ಸಕ್ರಿಯ ಪ್ರಕರಣಗಳಿವೆ. ಇವರ ಪೈಕಿ 1186 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದರೆ, ಉಳಿದ 1375 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 77ಕ್ಕೆ ತಲುಪಿದೆ.
ಶನಿವಾರ ಹೊಸದಾಗಿ 789 ಜನರ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಪಡೆಯಲಾಗಿದೆ. ಇವರಲ್ಲಿ 200 ಜನರ ಪರೀಕ್ಷಾ ವರದಿ ಮಾತ್ರ ಬರಲು ಬಾಕಿ ಇದೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ವಿವರಿಸಿದ್ದಾರೆ.