ಉಡುಪಿ: ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಕೊರೋನಾ ವ್ಯಾದಿ ಸ್ಪೋಟಗೊಂಡಿದೆ. ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ ಕೋವಿಡ್ -19 ಖಚಿತ ಸೋಂಕು ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿದೆ.
ಎರಡು ವರ್ಷ ಪ್ರಾಯದ ಇಬ್ಬರು ಪುಟಾಣಿಗಳ ಸಹಿತ ಇಂದು 204 ಜನರಲ್ಲಿ ಸಾಂಕ್ರಾಮಿಕ ನೋವೆಲ್ ಕೊರೋನಾ ವೈರಸ್ ಪತ್ತೆಯಾಗಿದೆ. ಒಂದೇ ದಿನ 2000 ಗಂಟಲ ದ್ರವ ಮಾದರಿಗಳ ಕೋವಿಡ್ ಪರೀಕ್ಷಾ ವರದಿಗಳು ಆರೋಗ್ಯ ಇಲಾಖೆ ಕೈಸೇರಿದ್ದರಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಮಾಹಿತಿ ನೀಡಿದ್ದಾರೆ.
ಸೋಂಕಿತರಲ್ಲಿ 203 ಮಂದಿ ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಒಬ್ಬರು ಸ್ಥಳೀಯರಲ್ಲಿ ಅಂದರೆ ಜಿಲ್ಲಾ ಗಡಿ ಭಾಗದಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ 157 ಮಂದಿ ಪುರುಷರು, 40 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 768 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 108 ಮಂದಿ ಸೋಂಕಿನಿಂದ ಮುಕ್ತರಾಗಿದ್ದು, ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 659 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದೆ.