ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 245 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಬಹುವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೋವಿಡ್ ಸೋಂಕಿಗೆ ತುತ್ತಾದ ಐವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ 75, 70 ಮತ್ತು 65 ವರ್ಷ ಪ್ರಾಯದ ವೃದ್ಧರು, ಉಡುಪಿ ತಾಲೂಕಿನ 78 ವರ್ಷ ಪ್ರಾಯದ ವೃದ್ಧೆ ಹಾಗೂ ಕಾರ್ಕಳ ತಾಲೂಕಿನ 48ರ ಹರೆಯದ ವ್ಯಕ್ತಿ ಮೃತಪಟ್ಟವರು. ಎಲ್ಲರಿಗೂ ಬಹುವಿಧ ಕಾಯಿಲೆಗಳಿದ್ದು, ಕೋವಿಡ್ ಪಾಸಿಟಿವ್ ಆಗಿದ್ದರು. ಎಲ್ಲರ ಅಂತ್ಯ ಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಗಿದೆ. ಇದರೊಂದಿಗೆ ಮೃತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಹೊಸ ಸೋಂಕಿತರಲ್ಲಿ ಉಡುಪಿ ತಾಲೂಕಿನ 125, ಕುಂದಾಪುರದ 92 ಮತ್ತು ಕಾರ್ಕಳ ತಾಲೂಕಿನ 25 ಮಂದಿ, ಹೊರ ಜಿಲ್ಲೆಯ ಮೂವರು ಸೇರಿದ್ದಾರೆ. ಇವರಲ್ಲಿ 70 ಜನರಲ್ಲಿ ರೋಗ ಲಕ್ಷಣಗಳು ಗೋಚರಿಸಿದ್ದರೆ, ಉಳಿದ 175 ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಇವರಲ್ಲಿ 89 ಜನರು ಮನೆ ಆರೈಕೆಯಲ್ಲಿದ್ದು, ಉಳಿದವರು ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಸಂಖ್ಯೆ 5605ಕ್ಕೆ ಏರಿಕೆ
ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5605ಕ್ಕೆ ಏರಿಕೆಯಾಗಿದೆ. ಈ ಪೈಕಿ 3258 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಶುಕ್ರವಾರ ಮನೆ ಆರೈಕೆ ಮತ್ತು ಆಸ್ಪತ್ರೆಯಿಂದ 101 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲೀಗ 2292 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದೆ. ಈ ಪೈಕಿ 1144 ಜನರು ಮನೆ ಆರೈಕೆಯಲ್ಲಿದ್ದಾರೆ ಎಂದು ಡಿಎಚ್ಒ ವಿವರಿಸಿದ್ದಾರೆ.
ಆರೋಗ್ಯ ಇಲಾಖೆಗೆ ಹೊಸದಾಗಿ ಲಭಿಸಿದ 1148 ಮಂದಿಯ ವರದಿ ನೆಗೆಟಿವ್ ಬಂದಿದೆ. ಕೋವಿಡ್-19 ರ್ಯಾಂಡಮ್ ಪರೀಕ್ಷೆ ಚುರುಕುಗೊಂಡಿದ್ದು, ಶುಕ್ರವಾರ 1357 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇವರಲ್ಲಿ 1203 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಡಿಎಚ್ಒ ತಿಳಿಸಿದ್ದಾರೆ.