Thursday, August 18, 2022

Latest Posts

ಉಡುಪಿ ಜಿಲ್ಲೆಯಲ್ಲಿ 13 ಜನರಿಗೆ ಶನಿವಾರ ಕೋವಿಡ್-19 ಸೋಂಕು ದೃಢ

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಮೃತಪಟ್ಟ ಕೋವಿಡ್ ಸೋಂಕಿತನ ಪತ್ನಿ, ಮಗಳು ಸಹಿತ ಒಟ್ಟು 13 ಜನರಿಗೆ ಶನಿವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1063ಕ್ಕೆ ತಲುಪಿದ್ದು, ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.
ಹೊಸ ಸೋಂಕಿತರಲ್ಲಿ 8 ಮಂದಿ ಪುರುಷರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಕಾರು ಚಾಲಕ, ಪತ್ನಿ, ಪುತ್ರಿಯೊಂದಿಗೆ 54ರ ಹರೆಯದ ವ್ಯಕ್ತಿ ಗುರುವಾರ ಮಹಾರಾಷ್ಟ್ರದಿಂದ ತೆಕ್ಕಟ್ಟೆಗೆ ಬಂದಿದ್ದು, ಅಂದು ಸಂಜೆ ಮೃತಪಟ್ಟಿದ್ದರು. ಬಳಿಕ ಅವರಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಇದೀಗ ಮೃತರ 45ರ ಹರೆಯದ ಪತ್ನಿ ಹಾಗೂ 24ರ ಹರೆಯದ ಮಗಳಿಗೂ ವೈರಸ್ ಅಂಟಿದೆ. ಆದರೆ ಚಾಲಕನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಉಳಿದಂತೆ ಇನ್ನೂ 8ಮಂದಿ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಜಿಲ್ಲೆಗಾಗಮಿಸಿದ ೫೫ರ ಹರೆಯದ ಬ್ಯಾಂಕ್ ಉದ್ಯೋಗಿಯಲ್ಲಿ ಕೋವಿಡ್ ವ್ಯಾಧಿ ಕಂಡು ಬಂದಿದೆ. ಖಾಸಗಿ ಆಸ್ಪತ್ರೆಯ ೩೦ವರ್ಷ ಪ್ರಾಯದ ಲ್ಯಾಬ್ ಟೆಕ್ನಿಷಿಯನ್ ಸಂಪರ್ಕದಿಂದ ಇನ್ನಿಬ್ಬರು ವ್ಯಕ್ತಿಗಳಿಗೆ ಸೋಂಕು ಹರಡಿದೆ. ಸೋಂಕಿತರಲ್ಲಿ ನಾಲ್ವರು ಕಾರ್ಕಳ ತಾಲೂಕು, ೫ಜನ ಬೈಂದೂರು, ಮೂವರು ಕುಂದಾಪುರ ಮತ್ತು ಒಬ್ಬರು ಬ್ರಹ್ಮಾವರ ತಾಲೂಕಿಗೆ ಸೇರಿದ್ದಾರೆ. ಎಲ್ಲರನ್ನೂ ಸ್ಥಳೀಯ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಕೋವಿಡ್ ಆಸ್ಪತ್ರೆಗಳಿಂದ ಮತ್ತೆ 9 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದವರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟರೆ, ಇಬ್ಬರು ದ.ಕ. ಜಿಲ್ಲೆಗೆ ತೆರಳಿದ್ದಾರೆ. ಪ್ರಸಕ್ತ ಜಿಲ್ಲೆಯಲ್ಲಿ 100 ಮಂದಿಯಲ್ಲಿ ನೋವೆಲ್ ಕೊರೋನಾ ವೈರಸ್ ಸಕ್ರಿಯವಾಗಿದೆ.
ಆರೋಗ್ಯ ಇಲಾಖೆಗೆ ದೊರೆತ ಒಟ್ಟು 122ವರದಿಗಳಲ್ಲಿ 109 ಜನರಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ವಿವಿಧ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 40, ಸೋಂಕಿತರ ಸಂಪರ್ಕಕ್ಕೆ ಬಂದ 10, ಶಂಕಿತ ರೋಗ ಲಕ್ಷಣಗಳಿರುವ 16, ತೀವ್ರ ಉಸಿರಾಟದ ತೊಂದರೆ ಇರುವ ಒಬ್ಬರು ಮತ್ತು ಶೀತ ಜ್ವರವಿರುವ ಆರು ಜನ ಸೇರಿ ಒಟ್ಟು ೭೩ ಮಂದಿಯ ಗಂಟಲ ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಒಟ್ಟು 182 ಜನರ ವರದಿ ಬರಬೇಕಿದೆ.
ಹೊಸದಾಗಿ 15ಮಂದಿ ವಿವಿಧ ಆಸ್ಪತ್ರೆಗಳ ಪ್ರತ್ಯೇಕಿತ ವಾರ್ಡ್‌ಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ಶಂಕಿತ ರೋಗ ಲಕ್ಷಣಗಳಿರುವ ನಾಲ್ವರು, ತೀವ್ರ ಉಸಿರಾಟದ ತೊಂದರೆ ಇರುವ 5 ಮತ್ತು ಶೀತ ಜ್ವರವಿರುವ 6 ಜನ ಇದ್ದಾರೆ. ಪ್ರತ್ಯೇಕಿತ ವಾರ್ಡ್‌ಗಳಲ್ಲಿ 72 ಮಂದಿ ನಿಗಾದಲ್ಲಿದ್ದರೆ, 750 ಜನ ಗೃಹ ದಿಗ್ಬಂಧನದಲ್ಲಿ ನಿಗಾದಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಲ್ಯಾಬ್ ಟೆಕ್ನಿಷಿಯನ್‌ನಿಂದ 6 ಜನಕ್ಕೆ ಸೋಂಕು
ಉಡುಪಿ ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಮತ್ತೆ ಎದುರಾಗಿದೆ. ಖಾಸಗಿ ಆಸ್ಪತ್ರೆಯ 30 ರ ಹರೆಯದ ಲ್ಯಾಬ್ ಟೆಕ್ನಿಷಿಯನ್‌ಗೆ ಸೋಂಕು ಅಂಟಿಕೊಂಡಿದ್ದು, ಇದೀಗ ಆಕೆಯಿಂದ ಮನೆಯವರಿಗೆ ಮತ್ತು ಸಂಬಂಧಿಕರಿಗೂ ಹರಡುತ್ತಿದೆ. ಸುಮಾರು 15 ದಿನಗಳ ಹಿಂದೆ ಆಕೆಯಲ್ಲಿ ಸೋಂಕು ದೃಢಪಟ್ಟರೆ, ನಂತರ 5 ವರ್ಷ ಪ್ರಾಯದ ಮಗನಲ್ಲಿ ಸೋಂಕು ಕಾಣಸಿಕೊಂಡಿತ್ತು. ಬಳಿಕ 63ರ ಹರೆಯದ ತಂದೆ, 29 ರ ಹರೆಯದ ನಾದಿನಿ, 22ರ ಹರೆಯದ ತುಂಬು ಗರ್ಭಿಣಿ ತಂಗಿಗೂ ವೈರಸ್ ಹರಡಿತ್ತು. ಇದೀಗ 62ವರ್ಷ ಪ್ರಾಯದ ಮಾವ ಮತ್ತು 32ರ ಹರೆಯದ ಸಂಬಂಧಿಯಲ್ಲಿಯೂ ಸೋಂಕು ಪತ್ತೆಯಾಗಿದೆ. ಇವರಿಂದ ಇನ್ನಷ್ಟು ಜನರಿಗೂ ಕೋವಿಡ್-19 ಸೋಂಕು ಪಸರಿಸಿರುವ ಸಂಶಯ ಆರೋಗ್ಯ ಇಲಾಖೆಗೆ ವ್ಯಕ್ತವಾಗಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಲವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!