ಉಡುಪಿ: ಕೋವಿಡ್ ಪರೀಕ್ಷೆ ನಡೆದು ಭಾನುವಾರ ಆರೋಗ್ಯ ಇಲಾಖೆಗೆ ಲಭಿಸಿದ 63 ವರದಿಗಳಲ್ಲಿ 20 ವರದಿಗಳು ಕೊರೋನಾ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1026ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 789 ಮಂದಿ ಸೋಂಕಿನಿಂದ ಮುಕ್ತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಪೈಕಿ ಭಾನುವಾರ ೫೬ ಮಂದಿ ಬಿಡುಗಡೆಗೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇನ್ನೂ 233 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಭಾನುವಾರ ಒಟ್ಟು 77 ಮಂದಿಯ ಗಂಟಲ ದ್ರವದ ಮಾದರಿಯನ್ನು ಮಣಿಪಾಲದ ಪ್ರಯೋಗಾಲಯಕ್ಕೆ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಜಿಲ್ಲೆಗಾಗಮಿಸಿದ 56 ಮಂದಿ, ಶೀತ ಜ್ವರ ಬಾಧಿತರಾಗಿರುವ 9 ಜನ, ಕೋವಿಡ್ ಶಂಕಿತರು 5, ಸೋಂಕಿತರ ಸಂಪರ್ಕಕ್ಕೆ ಬಂದ 4 ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ೯ ಮಂದಿ ಸೇರಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಇರುವ 6, ರೋಗದ ಶಂಕಿತ ಲಕ್ಷಣಗಳಿರುವ ಒಬ್ಬರು ಮತ್ತು ಶೀತಜ್ವರ ಬಾಧಿಸಿದ ಇಬ್ಬರು ಒಟ್ಟು 9 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಪ್ರತ್ಯೇಕಿತ ವಾರ್ಡ್ಗಳಿಗೆ ದಾಖಲಾಗಿದ್ದಾರೆ. ಪ್ರಸ್ತುತ ಪ್ರತ್ಯೇಕಿತ ವಾರ್ಡ್ಗಳಲ್ಲಿ ಒಟ್ಟು 79 ಮಂದಿ ನಿಗಾದಲ್ಲಿದ್ದಾರೆ. ಆಸ್ಪತ್ರೆ ದಿಗ್ಬಂಧನದಲ್ಲಿ ಆರು, ಗೃಹ ದಿಗ್ಬಂಧನದಲ್ಲಿ 475 ಜನರಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟ 12,907 ಜನರಲ್ಲಿ 1026 ಮಂದಿಗೆ ಸೋಂಕು ಕಾಣಿಸಿಕೊಂಡರೆ, 11778 ಮಂದಿ ಸೋಂಕು ರಹಿತರಾಗಿದ್ದಾರೆ. ಇನ್ನು 103 ಮಂದಿಯ ಪರೀಕ್ಷಾ ವರದಿ ಬರಬೇಕಿದೆ ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.