Thursday, August 18, 2022

Latest Posts

ಉಡುಪಿ ಜಿಲ್ಲೆಯಲ್ಲಿ 248 ಮಂದಿಯಲ್ಲಿ ನೋವೆಲ್ ಕೊರೋನಾ ವೈರಸ್ ಪತ್ತೆ, 122 ಮಂದಿ ಗುಣಮುಖ

ಉಡುಪಿ: ಮತ್ತೆ ಆರು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪೀಡಿತರ ಸಂಖ್ಯೆ 1000ದ ಗಡಿ ದಾಟಿದೆ. ಗುರುವಾರ 248 ಮಂದಿಯಲ್ಲಿ ನೋವೆಲ್ ಕೊರೋನಾ ವೈರಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4143ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೇವಲ 6 ದಿನಗಳಲ್ಲಿ 1100ಕ್ಕೂ ಅಧಿಕ ಕೋವಿಡ್-19 ಸೋಂಕು ಖಚಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಶುಕ್ರವಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3000ರ ಗಡಿ ದಾಟಿತ್ತು. ಅದಾಗಿ ಕೇವಲ 6 ದಿನಗಳಲ್ಲಿ ಇದು 4000 ಗಡಿಯನ್ನು ದಾಟಿ ಮುಂದೆ ಹೋಗಿದೆ. ಜಿಲ್ಲೆಯಲ್ಲಿ 2000 ಖಚಿತ ಪ್ರಕರಣಗಳಿಂದ 3000 ಆಗಲು ತೆಗೆದುಕೊಂಡಿದ್ದು ಕೂಡ 6 ದಿನಗಳು. ಆದರೆ ಮೊದಲ ಪ್ರಕರಣದಿಂದ 1000 ಗಡಿ ದಾಟಲು 81 ದಿನಗಳನ್ನು ತೆಗೆದುಕೊಂಡಿದೆ. ಬಳಿಕ ಅದು 2000 ಸಾವಿರ ಆಗಲು ತೆಗೆದುಕೊಂಡ ಅವಧಿ 35 ದಿನಗಳು.
ಜಿಲ್ಲೆಯಲ್ಲಿ 122 ಮಂದಿ ಚೇತರಿಕೆ
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಸೋಂಕಿತರಲ್ಲಿ 2445 ಮಂದಿ ಸಂಪೂರ್ಣ ಗುಣಮುಖರಾಗಿ, ಸೋಂಕು ಮುಕ್ತರಾಗಿದ್ದಾರೆ. ಇವರಲ್ಲಿ 122 ಮಂದಿ ಸಂಪೂರ್ಣ ಚೇತರಿಕೆಯಾಗಿ ಗುರುವಾರ ಒಂದೇ ದಿನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1669 ಜನರಲ್ಲಿ ವೈರಸ್ ಸಕ್ರಿಯವಾಗಿದೆ. ಮತ್ತೆ ಮೂವರು ವೃದ್ಧೆಯರು ಮತ್ತು ಓರ್ವ ವೃದ್ಧ ಸೇರಿ ನಾಲ್ವರು ಕೋವಿಡ್ ಸೋಂಕಿತರು ಬುಧವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 29ಮಂದಿ ಅಸುನೀಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಗುರುವಾರ ಆರೋಗ್ಯ ಇಲಾಖೆಗೆ ಲಭ್ಯವಾದ ಒಟ್ಟು 1010 ವರದಿಗಳಲ್ಲಿ 248 ವರದಿಗಳು ಪಾಸಿಟಿವ್ ಆಗಿದ್ದರೆ, ಉಳಿದ 762 ವರದಿಗಳು ನೆಗೆಟಿವ್ ಆಗಿವೆ. ಹೊಸದಾಗಿ 824 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವರದ್ದೂ ಸೇರಿ ಒಟ್ಟು 835 ಮಂದಿಯ ವರದಿ ಬರಲು ಬಾಕಿ ಇದೆ. ಪ್ರತ್ಯೇಕಿತ ವಾರ್ಡ್‌ಗಳಲ್ಲಿ 42 ಜನ ಹೊಸದಾಗಿ ದಾಖಲಾಗಿದ್ದು, ಒಟ್ಟು 286 ಜನರು ಆಸ್ಪತ್ರೆ ನಿಗಾದಲ್ಲಿದ್ದಾರೆ. ಗೃಹ ದಿಗ್ಬಂಧನದಲ್ಲಿ 1369 ಜನರಿದ್ದಾರೆ ಎಂದು ಡಿಎಚ್‌ಒ ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!