Tuesday, July 5, 2022

Latest Posts

ಉಡುಪಿ ಜಿಲ್ಲೆಯಲ್ಲಿ 375 ಜನರಲ್ಲಿ ಕೊರೋನಾ ಪಾಸಿಟಿವ್ ದೃಢ: 9 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ವ್ಯಾಧಿ ಬಾಧಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ಆದರೆ 6ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
ಬುಧವಾರದವರೆಗೆ ಉಡುಪಿ ಜಿಲ್ಲೆಯಲ್ಲಿ 58,473 ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 9041 ಜನರಿಗೆ ಸೋಂಕು ದೃಢಪಟ್ಟಿದೆ. ಅಂದರೆ ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರಲ್ಲಿ ಶೇ. 15.46 ರಷ್ಟು ಪಾಸಿಟಿವ್ ಬಂದಿದೆ. ಉಳಿದ 49,432 ಮಂದಿಗೆ ಸಾಂಕ್ರಮಿಕ ಸೋಂಕು ಅಂಟದಿರುವುದು ಕೂಡ ಖಚಿತವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಆರಂಭದಲ್ಲಿ 3 ಇದ್ದ ಸೋಂಕಿತರ ಸಂಖ್ಯೆ, ಪ್ರಸಕ್ತ ಮೂರೇ ದಿನಗಳಲ್ಲಿ ಸಾವಿರವಾಗುತ್ತಿದೆ!
ಜಿಲ್ಲೆಯಲ್ಲಿ ಚೇತರಿಕೆ ದರ ಶೇ. 67.82
ಉಡುಪಿ ಜಿಲ್ಲೆಯ ಒಟ್ಟು ಸೋಂಕಿತರಲ್ಲಿ 6132 ಮಂದಿ ಗುಣಮುಖರಾಗಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯ ಚೇತರಿಕೆ ದರವು ಶೇ. 67.82ರಷ್ಟಿದೆ. ಗುಣಮುಖರಾದವರಲ್ಲಿ 4411 ಮಂದಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆದರೆ, 1721 ಜನರು ಮನೆಗಳಲ್ಲಿಯೇ ಆರೈಕೆ ಪಡೆದಿದ್ದಾರೆ. ಬುಧವಾರ 181 ಜನರು ಚೇತರಿಸಿಕೊಂಡು ಆಸ್ಪತ್ರೆ, ಕೋವಿಡ್ ಕೇರ್‌ಸೆಂಟರ್ ಮತ್ತು ಮನೆ ಆರೈಕೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 78 ಮಂದಿ ಮೃತಪಟ್ಟಿದ್ದಾರೆ.
ಮತ್ತೆ 375 ಹೊಸ ಸೋಂಕಿತರು ಪತ್ತೆ
ಬುಧವಾರ ಉಡುಪಿ ಜಿಲ್ಲೆಯ 375 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 99 ಮಂದಿಯಲ್ಲಿ ಮಾತ್ರ ರೋಗ ಲಕ್ಷಣಗಳಿವೆ. ಉಳಿದ 276 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, 215 ಜನರಿಗೆ ಸೋಂಕು ತಗುಲಿದೆ. ಕುಂದಾಪುರ ತಾಲೂಕಿನಲ್ಲಿ 131 ಮತ್ತು ಕಾರ್ಕಳ ತಾಲೂಕಿನಲ್ಲಿ 27 ಮಂದಿಗೆ ವ್ಯಾಧಿ ಅಂಟಿದೆ. ಇವರೂ ಸೇರಿ 2831 ಜನರಲ್ಲಿ ವೈರಸ್ ಸಕ್ರಿಯವಾಗಿದೆ. ಇವರಲ್ಲಿ 1528 ಜನರು ಅಂದರೆ ಶೇ. 54ರಷ್ಟು ಮಂದಿ ಮನೆಗಳಲ್ಲಿಯೇ ಆರೈಕೆಯಲ್ಲಿದ್ದಾರೆ.
ಆರೋಗ್ಯ ಇಲಾಖೆಗೆ ಬುಧವಾರ ದೊರೆತ 1608 ಜನರ ವರದಿಗಳು ಕೋವಿಡ್ ನೆಗೆಟಿವ್ ಆಗಿವೆ. ಮತ್ತೆ ಹೊಸದಾಗಿ 1597 ಜನರ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರಲ್ಲಿ ಇನ್ನು 700 ಜನರ ವರದಿ ಬರಲು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss