ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ ಕೆಲವು ಗ್ರಾಮಗಳು ನೆರೆಯ ಭೀತಿಯಲ್ಲಿವೆ. ನಿನ್ನೆ ರಾತ್ರಿಯಿಂದಲೂ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ.
ಭಾನುವಾರ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಸಹಿತ ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಮಾಡಿದರು.
ಸೌಪರ್ಣಿಕಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇದರಿಂದ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಮತ್ತು ಮರವಂತೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಮುಳಗಡೆಯಾಗಿವೆ. ಇದರಿಂದ ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಜನರ ಸಂಚಾರಕ್ಕಾಗಿ ಜಿಲ್ಲಾಡಳಿತದಿಂದ ಎರಡು ದೋಣಿಗಳನ್ನು ಒದಗಿಸಲಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಮಡಿಸಾಲು ಹೊಳೆ ತುಂಬಿ ಹರಿಯುತ್ತಿದೆ. ನಿನ್ನೆ ಸಂಜೆಯ ವೇಳೆ ನದಿಯಲ್ಲಿ ಅಪಾಯದ ಮಟ್ಟದಲ್ಲಿ ಪ್ರವಾಹವಿತ್ತು. ಇಲ್ಲಿನ ಐದಾರು ಮನೆಗಳ ಅಂಗಳಕ್ಕೆ ನೀರು ಬಂದಿದ್ದು, ಮನೆಯೊಳಗೆ ನುಗ್ಗುವ ಅಪಾಯವಿದೆ. ಇಲ್ಲಿಯೂ ಜಿಲ್ಲಾಧಿಕಾರಿ ಅವರ ತಂಡ ಭೇಟಿ ನೀಡಿ, ಪರಿಶೀಲಿಸಿದೆ. ಎರಡೂ ಕಡೆಗಳಲ್ಲಿ ನದಿ ಪಾತ್ರದ ಮನೆಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ಯಾವುದೇ ಸಮಸ್ಯೆಗಳಾದರೆ ತಕ್ಷಣ ಸ್ಥಳೀಯಾಡಳಿತ, ಜಿಲ್ಲಾಡಳಿತದ ಕಂಟ್ರೋಲ್ ರೂಂ ಅಥವಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
ಕುಂದಾಪುರ ಶಾಸಿ ಸರ್ಕಲ್ ಪರಿಶೀಲನೆ
ಕುಂದಾಪುರ ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಾಸಿ ಸರ್ಕಲ್ ಬಳಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ರಸ್ತೆಯಲ್ಲಿ ನೀರು ನಿಂತು, ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಇಲ್ಲಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಕ್ಷಣ ದುರಸ್ತಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಸೂಚನೆ ನೀಡಿದರು.
’ಹೊಸ ದಿಗಂತ’ದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ ಅವರು, ಮರವಂತೆ ಮತ್ತು ನಾವುಂದ ಗ್ರಾಮಗಳಿಗೆ ಭೇಟಿ ನೀಡಿದೆ. ಅಲ್ಲಿನ ಸಂಪರ್ಕ ರಸ್ತೆ ಮುಳಗಡೆಯಾದ ಬಗ್ಗೆ ವರದಿ ಬಂದಿತ್ತು. ವೀಕ್ಷಣೆ ಮಾಡಿದ್ದು, ಇದೀಗ ನೆರೆ ಇಳಿದಿದೆ. ಸ್ಥಳೀಯರ ಓಡಾಟಕ್ಕೆ ಜಿಲ್ಲಾಡಳಿತ ಎರಡು ದೋಣಿಗಳ ವ್ಯವಸ್ಥೆ ಮಾಡಿದ್ದು, ದೋಣಿ ನಡೆಸುವವರಿಗೆ ಗೌರವ ಸಂಭಾವನೆಯನ್ನು ನಮ್ಮ ವತಿಯಿಂದಲೇ ನೀಡಲು ತಹಶೀಲ್ದಾರರಿಗೆ ಸೂಚನೆ ನೀಡಿದ್ದೇನೆ. ಕುಂದಾಪುರ ಶಾಸಿ ಸರ್ಕಲ್ನಲ್ಲಿ ರಿಪೇರಿ ಕಾಮಗಾರಿ ನಡೆಸಲು ಎನ್ಎಚ್ಎಐ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಉಪ್ಪೂರು ಗ್ರಾಮದಲ್ಲಿ ನೆರೆ ಭೀತಿ ಎದುರಿಸುವ ಐದಾರು ಮನೆಗಳಿಗೂ ಭೇಟಿ ನೀಡಿದ್ದು, ನಿನ್ನೆ ರಾತ್ರಿ ನೀರು ಏರಿತ್ತು. ಈಗ ಇಳಿದಿದೆ, ಅಪಾಯವಿಲ್ಲ. ಆದರೆ ಎಲ್ಲರಿಗೂ ಎಚ್ಚರಿಕೆಯಿಂದ ಇರಲು ಸೂಚಿಸಿದ್ದು, ಆಡಳಿತದ ಸಹಾಯ ಪಡೆಯಲು ತಿಳಿಸಿದೆ ಎಂದು ಹೇಳಿದರು.