ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಕೋವಿಡ್ ತಲೆನೋವಾಗಿ ಪರಿಣಮಿಸುತ್ತಿದೆ. ಭಾನುವಾರ ಮೂವರು ಪೊಲೀಸರಲ್ಲಿ ಸೋಂಕು ದೃಢಪಟ್ಟಿದ್ದರೆ, ಸೋಮವಾರ ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೂ ಕೋವಿಡ್ ಕಾಣಿಸಿಕೊಂಡಿದೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 57ರ ಹರೆಯದ ಹೆಡ್ ಕಾನ್ಸ್ಟೇಬಲ್ಗೆ ಸೊಂಕು ದೃಢಪಟ್ಟಿದೆ. ಆದರೆ ಕಚೇರಿಯನ್ನು ಬಂದ್ ಮಾಡುವುದಿಲ್ಲ. ಎಸ್ಪಿ ಕಚೇರಿ ತೆರೆದಿರುತ್ತದೆ ಎಂದು ಎಸ್ಪಿ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.
ಸೋಂಕಿತ ಹೆಡ್ ಕಾನ್ಸ್ಟೇಬಲ್ ಕಚೇರಿಯ ಮುಂಬಾಗಿಲು ಭದ್ರತೆಯ ಉಸ್ತುವಾರಿ ನಿರ್ವಹಿಸುತ್ತಿದ್ದರು. ಅವರು ಕಚೇರಿ ಒಳಗೆ ಸಂಪರ್ಕಕ್ಕೆ ಬಂದಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಇಡೀ ಕಚೇರಿಯಲ್ಲಿ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಿಸಲಾಗಿತ್ತು. ಇದೀಗ ಮತ್ತೊಮ್ಮೆ ಇಡೀ ಕಚೇರಿಕೆ ಸೋಂಕು ನಿವಾರಕವನ್ನು ಸಿಂಪರಣೆ ನಡೆಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.
ಹೆಬ್ರಿ ಠಾಣೆ ಸ್ಥಳಾಂತರ: ಭಾನುವಾರ ಸೋಂಕು ಪತ್ತೆಯಾದ ಪೊಲೀಸರೊಂದಿಗೆ ಸೋಮೇಶ್ವರದ ಚೆಕ್ಪೋಸ್ಟ್ನಲ್ಲಿ ಹೆಬ್ರಿ ಪೊಲೀಸರು ಕೂಡ ಕರ್ತವ್ಯ ನಿರ್ವಹಿಸಿದ್ದರಿಂದ ಹೆಬ್ರಿ ಪೊಲೀಸ್ ಠಾಣೆಯನ್ನು ಕೂಡ ಮುಚ್ಚಲಾಗಿದೆ. ಹೆಬ್ರಿ ಠಾಣೆಗೆ ತಾತ್ಕಾಲಿಕ ಸಿಬ್ಬಂದಿಯನ್ನು ನಿಯೋಜಿಸಿದ್ದು, ತಾತ್ಕಾಲಿಕವಾಗಿ ಠಾಣೆಯನ್ನು ರಾಮಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಎರಡು ದಿನಗಳ ನಂತರ ಮತ್ತೆ ಸ್ವಸ್ಥಾನಕ್ಕೆ ಸ್ಥಳಾಂತರವಾಗಲಿದೆ.
ಈ ನಡುವೆ ಭಾನುವಾರ ಬಂದ್ ಮಾಡಲಾಗಿರುವ ಬ್ರಹ್ಮಾವರ, ಅಜೆಕಾರು ಮತ್ತು ಕಾರ್ಕಳ ನಗರ-ಗ್ರಾಮಾಂತರ ಠಾಣೆಗಳನ್ನು ಸೋಮವಾರ ಸ್ಯಾನಿಟೈಸ್ ಮಾಡಲಾಯಿತು. ಒಂದು ದಿನ ಬಿಟ್ಟು ಮತ್ತೆ ಈ ಎಲ್ಲ ಠಾಣೆಗಳು ಯಥಾ ಸ್ಥಿತಿಯಲ್ಲಿ ಕಾರ್ಯಾಚರಿಸಲಿವೆ.