Wednesday, August 10, 2022

Latest Posts

ಉಡುಪಿ ಜಿಲ್ಲೆಯ ಹೆದ್ದಾರಿ ಕಾಮಗಾರಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಸಂಸದೆ ಶೋಭಾ ತಾಕೀತು

ಮಣಿಪಾಲ: ಗುತ್ತಿಗೆದಾರ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಕೊರೋನಾದಿಂದಾಗಿ ವಿಳಂಬವಾಗಿರುವ ಜಿಲ್ಲೆಯ ಹೆದ್ದಾರಿ ಕಾಮಗಾರಿಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಹಾದುಹೋಗಿರುವ ರಾ.ಹೆ. 66 ಮತ್ತು ರಾ.ಹೆ. 169(ಎ) ಕಾಮಗಾರಿ ವಿಳಂಬದಿಂದಾಗಿ ಪಡುಬಿದ್ರೆ, ಕುಂದಾಪುರ ಹಾಗೂ ಪರ್ಕಳಗಳಲ್ಲಿ ತೀವ್ರ ತೊಂದರೆಯುಂಟಾಗುತ್ತಿದೆ. ಕಾಮಗಾರಿಯನ್ನು ತೀವ್ರಗೊಳಿಸಲು ಸೂಚಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕುಂದಾಪುರದಲ್ಲಿ ಉಂಟಾಗಿರುವ ಅವ್ಯವಸ್ಥೆಯ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಚರ್ಚಿಸಿದ್ದು, ತಕ್ಷಣವೇ ಸಮಸ್ಯೆ ಬಗೆಹರಿಸಲು ತಿಳಿಸಲಾಗಿದೆ ಎಂದರು.
ರಾ.ಹೆ. 169(ಎ)ರಲ್ಲಿ ಕರಾವಳಿ ಜಂಕ್ಷನ್ ಮತ್ತು ಪರ್ಕಳದಲ್ಲಿ ಪ್ರತ್ಯೇಕ ಯಂತ್ರಗಳನ್ನು ಸ್ಥಳದಲ್ಲಿರಿಸಿ, ರಸ್ತೆಯ ಹೊಂಡ-ಗುಂಡಿಗಳನ್ನು ಆಗಾಗ್ಗೆ ದುರಸ್ತಿಪಡಿಸಬೇಕು. ಪ್ರಸ್ತುತ ಆರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಉಡುಪಿ-ಮಣಿಪಾಲಕ್ಕೆ ಭೇಟಿ ನೀಡುತ್ತಾರೆ ಎಂದ ಸಂಸದೆ, ಹಿರಿಯಡ್ಕ ಓಂತಿಬೆಟ್ಟಿನಿಂದ ಪುತ್ತಿಗೆ ಸೇತುವೆವರೆಗೆ ರಸ್ತೆಯನ್ನು ಯಾವುದೇ ಧಾರ್ಮಿಕ ಹಾಗೂ ಶ್ರದ್ಧಾಕೇಂದ್ರಗಳಿಗೆ ತೊಂದರೆಯುಂಟಾಗದಂತೆ ಅಗಲಗೊಳಿಸಲಾಗುವುದು. ಹಾಗಾಗಿ ಮುಂದೆ ಈ ಭಾಗದಲ್ಲಿ ಮನೆ, ಇತ್ಯಾದಿ ಕಟ್ಟಡ ನಿರ್ಮಿಸುವವರು ಸೂಕ್ತ ಸ್ಥಳಾವಕಾಶ ಬಿಟ್ಟು ನಿರ್ಮಿಸುವಂತೆ ಮನವಿ ಮಾಡಿದರು.
ಕೊರೊನಾ ವಾರಿಯರ್‌ಗಳಿಗೆ ಶ್ಲಾಘನೆ
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ತಪಾಸಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಜೊತೆಜೊತೆಗೆ ಗುಣಮುಖರಾದವರ ಸಂಖ್ಯೆಯೂ ಜಾಸ್ತಿ ಇದೆ. ಇದುವರೆಗೆ ಜಿಲ್ಲೆಯ ಒಟ್ಟು 6,201 ಮಂದಿ ಸೋಂಕಿತರ ಪೈಕಿ 3,444 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 2,697 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ 1,297 ಮಂದಿ ಮನೆ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 60 ಮಂದಿ ಸಾವನ್ನಪ್ಪಿದ್ದರೂ ಕೊರೋನಾ ಪೀಡಿತರಾಗಿದ್ದರೂ ಅವರಿಗೆ ಇತರ ಆರೋಗ್ಯ ಸಮಸ್ಯೆ ಇತ್ತು. ಜಿಲ್ಲೆಯಲ್ಲಿ ಕೆಎಂಸಿ ಆಸ್ಪತ್ರೆಯೂ ಸೇರಿದಂತೆ ವಿವಿಧ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ಸಹಕರಿಸುತ್ತಿರುವ ಕೊರೋನಾ ವಾರಿಯರ್‌ಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss