ಉಡುಪಿ: ಕರಾವಳಿಯ ಸಾರ್ವಜನಿಕ ಸಾರಿಗೆಯ ಸಂಚಾರ ನಾಡಿಯಾಗಿರುವ ಖಾಸಗಿ ಬಸ್ಸುಗಳು ಜೂನ್ 1ರಿಂದ ರಸ್ತೆಗಿಳಿಯಲಿವೆ. ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ದರ ಶೇ. 15ರಷ್ಟು ಏರಿಕೆಯಾಗಿದ್ದು, ಮಣಿಪಾಲದಿಂದ ಮಂಗಳೂರಿಗೆ ಪ್ರಯಾಣಿಸಲು ಇನ್ನು ಮುಂದೆ 85 ರೂ. ನೀಡಬೇಕಾಗಿದೆ.
ಶನಿವಾರ ಕೆನರಾ ಬಸ್ಸು ಮಾಲೀಕರ ಸಂಘ, ಉಡುಪಿ ಸಿಟಿ ಬಸ್ಸು ಮಾಲಕರ ಸಂಘ ಹಾಗೂ ಮಂಗಳೂರು ಸಿಟಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಸಾರಿಗೆ ಸಚಿವರು ಖಾಸಗಿ ಬಸ್ಸಿನಲ್ಲಿ ಶೇ. 15 ರಷ್ಟು ಪ್ರಯಾಣ ದರ ಏರಿಕೆಗೆ ಒಪ್ಪಿಗೆ ನೀಡಿದ್ದಾರೆ. ಅದರಂತೆ ದರ ಏರಿಕೆ ಮಾಡುತ್ತಿದ್ದೇವೆ. ಇದು ಕೋವಿಡ್ ಸಂದರ್ಭದ ದರವಲ್ಲ, ನಿಯಮದಂತೆ ದರ ಪರಿಷ್ಕರಣೆಯಾಗಿದೆ. ಚಿಲ್ಲರೆ ಸಮಸ್ಯೆಯಾಗಬಾರದ ಹಿನ್ನೆಲೆಯಲ್ಲಿ ಕೆಲವು ಕಡೆ ದರದಲ್ಲಿ ವ್ಯತ್ಯಾಸ ಆಗಿದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.
ಜೂ. 1ರಿಂದ ಶೇ. 25ರಷ್ಟು ಬಸ್ಸುಗಳು ರಸ್ತೆಗಿಳಿಯಲಿವೆ. ಜನರ ಬೇಡಿಕೆಗೆ ಅನುಸಾರ ಬಸ್ಸುಗಳು ಓಡಾಟ ನಡೆಸಲಿವೆ. ಈ ಹಿಂದೆ 2-3 ನಿಮಿಷಗಳ ಅಂತರದಲ್ಲಿ ಬಸ್ಸುಗಳು ಓಡಾಡುತ್ತಿದ್ದರೆ, ಸದ್ಯ 15 ನಿಮಿಷಗಳಿಗೊಂದು ಬಸ್ಸು ಓಡಲಿದೆ. ಮಣಿಪಾಲ – ಮಂಗಳೂರು ಪ್ರಯಾಣ ದರ 85 ರೂ., ಉಡುಪಿ – ಮಂಗಳೂರು 80, ಕಾರ್ಕಳ – ಪಡುಬಿದ್ರಿ – ಮಂಗಳೂರು 65, ಕುಂದಾಪುರ – ಉಡುಪಿ – ಮಂಗಳೂರು 120, ಕುಂದಾಪುರ-ಉಡುಪಿ 55, ಕಾರ್ಕಳ – ಮೂಡುಬಿದಿರೆ – ಮಂಗಳೂರು 62, ಉಡುಪಿ – ಹಿರಿಯಡ್ಕ – ಕಾರ್ಕಳ 45 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಈ ವೇಳೆ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಚಾತ್ರ, ಮಂಗಳೂರು ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು