Sunday, June 26, 2022

Latest Posts

ಉಡುಪಿ: ಟ್ರಾಫಿಕ್ ಜಾಮ್ ಉಂಟು ಮಾಡಿದ ಲಾಕ್ ಡೌನ್ ಸಡಿಲಿಕೆ

ಉಡುಪಿ: ನೋವೆಲ್‍ ಕೊರೋನಾ ವೈರಸ್‍ ಸೋಂಕು ನಿಯಂತ್ರಣದಲ್ಲಿ ಹಸಿರು ವಲಯದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ ಡೌನ್ ಕೊಂಚ ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದಿರುವುದರಿಂದ ಮುಂಜಾನೆಯಿಂದಲೇ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು.

ಜಿಲ್ಲೆಯಲ್ಲಿ ಮೂರನೇ ಹಂತದ ಲಾಕ್ ಡೌನ್‍ ಜಾರಿಯಲ್ಲಿದ್ದರೂ ಹಲವು ಚಟುವಟಿಕೆಗಳಿಗೆ ರಿಯಾಯಿತಿ ನೀಡಲಾಗಿದೆ. ಮಾತ್ರವಲ್ಲದೇ ಅಗತ್ಯ ವಸ್ತುಗಳ ಖರೀದಿಗೆ, ಅಗತ್ಯ ಕೆಲಸ ಕಾರ್ಯಗಳನ್ನು ನಡೆಸಲು ಬೆಳಗ್ಗೆ 7ರಿಂದ ಮಧ್ಯಾಹ್ನ 1ಗಂಟೆಯವರೆಗೆ ಸಮಯ ವಿಸ್ತರಿಸಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಂದಣಿ ಅಧಿಕವಾಗಿತ್ತು. ಎಲ್ಲರೂ ತಮ್ಮ ದ್ವಿಚಕ್ರ ವಾಹನಗಳು, ಕಾರುಗಳಲ್ಲಿಯೇ ರಸ್ತೆಗಿಳಿದಿದ್ದರಿಂದ ಸಂಚಾರ ದಟ್ಟನೆಯಿಂದ ನಡೆದಾಡುವವರಿಗೆ ಕಿರಿಕಿರಿ ಉಂಟಾಯಿತು.

ರಿಕ್ಷಾಗಳ ಓಡಾಟವೂ ಸಾಮಾನ್ಯವಾಗಿತ್ತು. ಏಕಾಏಕಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಹರಿದು ಬಂದಿದ್ದರಿಂದ ಪೊಲೀಸ್‍, ಗೃಹ ರಕ್ಷಕ ದಳದವರು ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ನಗರದ ಕಲ್ಸಂಕ, ಕವಿಮುದ್ದಣ ಮಾರ್ಗ, ಕೋರ್ಟ್ ರಸ್ತೆ ಮೊದಲಾದ ಕಡೆಗಳಲ್ಲಿ ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ದಿನಸಿ ವಸ್ತು, ಬೇಕರಿ, ತರಕಾರಿ ಅಂಗಡಿಗಳ ಜೊತೆಗೆ, ಬಟ್ಟೆ, ಚಪ್ಪಲಿ, ಪೈಂಟ್, ಹಾರ್ಡ್ ವೇರ್, ಫ್ಯಾನ್ಸಿ, ಸಣ್ಣ ಸಣ್ಣ ಇಲೆಕ್ಟ್ರಾನಿಕ್ಸ್ ಅಂಗಡಿಗಳು, ಖಾಸಗಿ ಕಚೇರಿಗಳು ತೆರೆದುಕೊಂಡಿವೆ. ಇಂದಿನಿಂದ ಸರಕಾರಿ ಕಚೇರಿಗಳು ಕೂಡ ತೆರೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಚೇರಿಗಳತ್ತ ಆಗಮಿಸುತ್ತಿದ್ದಾರೆ. ಮೊಬೈಲ್‍ ರಿಚಾರ್ಜ್ ಅಂಗಡಿಗಳಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಪಾನಪ್ರಿಯರು ಸುಡುಬಿಸಿಲಿನ ನಡುವೆಯೂ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು, ಮದ್ಯ ಖರೀದಿಸಿದರು.

ಜಿಲ್ಲೆಯಲ್ಲಿ ಬಸ್ಸು ಸಂಚಾರ ಪ್ರಾರಂಭವಾಗಿಲ್ಲ. ಚಿನ್ನದಂಗಡಿಗಳು, ಮಾಲ್‍, ಚಿತ್ರಮಂದಿರ, ಸಲೂನ್‍, ಬ್ಯೂಟಿ ಪಾರ್ಲರ್ ಮೊದಲಾದವು ತೆರೆಯಲು ಅವಕಾಶವಿಲ್ಲದೇ ಇರುವುದರಿಂದ ಬಾಗಿಲು ಮುಚ್ಚಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss