Sunday, August 14, 2022

Latest Posts

ಉಡುಪಿ| ತವರಿಗೆ ಮರಳಲು ಶ್ರಮಿಕ್ ರೈಲು ಹತ್ತಿದ ಜಾರ್ಖಂಡ್ ವಲಸೆ ಕಾರ್ಮಿಕರು, ಮೇ 22ಕ್ಕೆ ಹಾಟಿಯಾ ನಿಲ್ದಾಣ ತಲುಪಲಿದೆ ವಿಶೇಷ ರೈಲು

ಉಡುಪಿ: ಎರಡು ತಿಂಗಳ ಲಾಕ್‌ಡೌನ್‌ನಿಂದ ಉಡುಪಿ ಜಿಲ್ಲೆಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರು ಬುಧವಾರ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ತಮ್ಮ ರಾಜ್ಯಕ್ಕೆ ಮರಳಿದ್ದಾರೆ.
ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಎರಡನೇ ಶ್ರಮಿಕ್ ವಿಶೇಷ ರೈಲಿನಲ್ಲಿ ಉಡುಪಿ ಜಿಲ್ಲೆಯ 958 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 146 ಜನ ಸೇರಿ ಒಟ್ಟು 1104 ಮಂದಿಯನ್ನು ಬೀಳ್ಕೊಡಲಾಯಿತು. ಸಂಜೆ 5.45ಕ್ಕೆ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಹೊರಟ ಶ್ರಮಿಕ್ ವಿಶೇಷ ರೈಲು (ರೈಲು ಸಂಖ್ಯೆ 01642) ಜಾರ್ಖಂಡ್ ರಾಜ್ಯದ ಹಾಟಿಯಾ ರೈಲು ನಿಲ್ದಾಣಕ್ಕೆ ಮೇ 22ರಂದು ಬೆಳಗ್ಗೆ 7.15ಕ್ಕೆ ತಲುಪಲಿದೆ. ಒಟ್ಟು 1110 ಸೀಟುಗಳನ್ನು ನಿಗದಿಪಡಿಸಿ, ಕೊಂಕಣ್ ರೈಲ್ವೆ ಬೋಗಿಗಳುಳ್ಳ ರೈಲನ್ನು ಒದಗಿಸಿತ್ತು. ಈ ಪೈಕಿ 1104 ಸೀಟುಗಳು ಭರ್ತಿಯಾದವು.
ಉಡುಪಿ ಜಿಲ್ಲೆಯ ಬ್ರಹ್ಮಾವರ, ಉಡುಪಿ ಮತ್ತು ಕಾಪು ತಾಲೂಕುಗಳಿಂದ 608 ಮಂದಿ, ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಿಂದ 126 ಹಾಗೂ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಿಂದ 224 ಮಂದಿ ವಲಸೆ ಕಾರ್ಮಿಕರು ಜಾರ್ಖಂಡ್‌ಗೆ ತೆರಳಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಿಂದ 146 ಜನ ತವರಿಗೆ ಪ್ರಯಾಣ ಬೆಳೆಸಿದರು.
ಇ-ಪಾಸ್ ಇರುವ 1178 ಜನ ತವರಿಗೆ
ಉಡುಪಿ ಜಿಲ್ಲೆಯಲ್ಲಿ ಜಾರ್ಖಂಡ್ ರಾಜ್ಯದ 1850 ಮಂದಿ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಬುಧವಾರ ಉಡುಪಿ ರೈಲ್ವೆ ನಿಲ್ದಾಣದಿಂದ 958 ಮಂದಿ ಹೊರಟಿದ್ದರೆ, ಮಂಗಳವಾರ ಮಂಗಳೂರು ರೈಲ್ವೆ ನಿಲ್ದಾಣದಿಂದ 220 ಜನರನ್ನು ತಮ್ಮ ರಾಜ್ಯಕ್ಕೆ ಕಳುಹಿಸಲಾಗಿದೆ. ಇ-ಪಾಸ್ ಹೊಂದಿರುವ ಜಾರ್ಖಂಡ್ ಮೂಲದ ಒಟ್ಟು 1,178 ಮಂದಿ ಉಡುಪಿ ಜಿಲ್ಲೆಯಿಂದ ತವರಿಗೆ ಹೊರಟಿದ್ದಾರೆ. ಉಳಿದವರಿಗೆ ಊತಮ್ಮ ರಾಜ್ಯಕ್ಕೆ ಮರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ‘ಹೊಸದಿಗಂತ’ಕ್ಕೆ ಮಾಹಿತಿ ನೀಡಿದ್ದಾರೆ.
ಊಟ-ಕುಡಿಯುವ ನೀರಿನ ವ್ಯವಸ್ಥೆ
ಬುಧವಾರ ದೂರದ ಊರುಗಳಿಂದ ಬರುವವರಿಗೆ ಕೆಎಸ್‌ಆರ್‌ಟಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್‌ಗೆ ಹೊರಟ ಎಲ್ಲರಿಗೂ ಊಟದ ಪೊಟ್ಟಣಗಳನ್ನು ನೀಡಲಾಯಿತು. ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದಿಂದ ಕಡಿಮೆ ದರದಲ್ಲಿ 4 ಲೀಟರ್ ಕುಡಿಯುವ ನೀರಿನ ಬಾಟಲಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ನಗರಸಭಾ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್, ಉಡುಪಿ ಡಿವೈಎಸ್ಪಿ ಜೈಶಂಕರ್, ಸಮಾಜ ಕಲ್ಯಾಣ ಇಲಾಖೆಯ ದಯಾನಂದ್ ಮತ್ತು ಉಡುಪಿ ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಮಂಜುನಾಥ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಮಂಜುನಾಥ ಹೆಬ್ಬಾರ್ ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ಕೊಂಕಣ್ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss