Sunday, August 14, 2022

Latest Posts

ಉಡುಪಿ| ತಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ: ಅಂಜಾರು ಕ್ಷೇತ್ರದ ಸಂಧ್ಯಾ ಕಾಮತ್ ಅಧ್ಯಕ್ಷರಾಗಿ, ತೆಂಕನಿಡಿಯೂರು ಕ್ಷೇತ್ರದ ಶರತ್‌ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆ

ಉಡುಪಿ: ವಿಭಜನೆಗೊಂಡ ಉಡುಪಿ ತಾಲೂಕಿನ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಿತು. ಅಂಜಾರು ಕ್ಷೇತ್ರದ ಸದಸ್ಯೆ ಸಂಧ್ಯಾ ಕಾಮತ್ ಅಧ್ಯಕ್ಷರಾಗಿ ಮತ್ತು ತೆಂಕನಿಡಿಯೂರು ಕ್ಷೇತ್ರದ ಸದಸ್ಯ ಶರತ್‌ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಭಜಿತ ಉಡುಪಿ ತಾಲೂಕು ಪಂಚಾಯತ್‌ನಲ್ಲಿ ಒಟ್ಟು 41 ಸದಸ್ಯರಿದ್ದರು. ಅದು ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕುಗಳಾಗಿ ವಿಭಜನೆಗೊಂಡ ಬಳಿಕ ಉಡುಪಿ ತಾ.ಪಂ.ನಲ್ಲಿ 13 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿಯ 9 ಮತ್ತು ಕಾಂಗ್ರೆಸ್‌ನ ನಾಲ್ವರು ಸದಸ್ಯರಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳು ಬಹುಮತವಿರುವ ಬಿಜೆಪಿಯ ಪಾಲಾಗಿವೆ.
ನೂತನ ಅಧ್ಯಕ್ಷೆ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷ ಶರತ್‌ಕುಮಾರ್ ಬೈಲಕೆರೆ ಅವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ವರ್ಷ 2021ರ ಮಾರ್ಚ್‌ವರೆಗೆ ಉಡುಪಿ ತಾ.ಪಂ.ಗೆ ಆಯ್ಕೆಯಾಗಿರುವ ಸದಸ್ಯರ ಅವಧಿ ಇದೆ. ಇನ್ನು 8 ತಿಂಗಳ ಕಾಲ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ ಇದೆ.
ಉಡುಪಿ ತಾ.ಪಂ. ಸಭಾ ಭವನದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಕುಂದಾಪುರ ಸಹಾಯಕ ಕಮಿಷನರ್‌ ಕೆ. ರಾಜು ಅವರು ನಡೆಸಿದರು. ಈ ಸಂದರ್ಭದಲ್ಲಿ ಉಡುಪಿ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ರಾಜ್ ಹಾಗೂ ಆವಿಭಜಿತ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕು ಪಂಚಾಯತ್‌ನ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss