Monday, August 15, 2022

Latest Posts

ಉಡುಪಿ ನಗರದಲ್ಲಿ ಚಾಲಕರನ್ನು ಬೆಚ್ಚಿಬೀಳಿಸುತ್ತಿದ್ದ ಹೊಂಡಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ

ಉಡುಪಿ: ಕೊನೆಗೂ ಉಡುಪಿ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169 (ಎ)ರ ಸಂಪರ್ಕ ರಸ್ತೆಯ ಇಂಟರ್‌ಲಾಕ್ ಎದ್ದು 5 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಗುಂಡಿಗೆ ಮಂಗಳವಾರ ಮುಕ್ತಿ ದೊರೆತಿದೆ.
ರಾಷ್ಟ್ರೀಯ ಹೆದ್ದಾರಿಗೆ ಉಡುಪಿ ನಗರಸಭೆ ರಸ್ತೆ ಸಂಪರ್ಕವಾಗುವಲ್ಲಿ ಒಳಚರಂಡಿ ವ್ಯವಸ್ಥೆಯ ಮ್ಯಾನ್ ಹೋಲ್ ಸಮೀಪ ಅಪಾಯಕಾರಿ ಗುಂಡಿ ನಿರ್ಮಾಣವಾಗಿತ್ತು. ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದರೂ ಸ್ಥಳೀಯರು ದೂರು ಕೊಟ್ಟರೂ ನಗರಸಭೆ ಇತ್ತ ಗಮನಹರಿಸಿರಲಿಲ್ಲ.
ಕಳೆದ ಕೆಲವು ದಿನಗಳಿಂದ ಈ ಗುಂಡಿ ದೊಡ್ಡದಾಗಿ ಅಪಾಯದ ತೀವ್ರತೆ ಹೆಚ್ಚಾದಾಗ, ಅದಕ್ಕೆ ತಡೆಬೇಲಿ ನಿರ್ಮಿಸಲಾಗಿತ್ತು. ಈ ಬಗ್ಗೆ ‘ಹೊಸದಿಗಂತ’ ಸಹಿತ ಮಾಧ್ಯಮಗಳು ಸಚಿತ್ರ ವರದಿ ಮಾಡಿದ್ದವು. ‘ಹೊಸದಿಗಂತ’ದಲ್ಲಿ ಬಂದ ವರದಿಯನ್ನು ಓದಿದ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಅವರಿಗೆ ತಕ್ಷಣ ಗುಂಡಿಯನ್ನು ಮುಚ್ಚಿ ದುರಸ್ತಿ ಪಡಿಸಲು ಸೂಚಿಸಿದ್ದರು.
ಅದರಂತೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಕಿತ್ತುಹೋದ ಇಂಟರ್‌ಲಾಕ್‌ಗಳನ್ನು ಸರಿಪಡಿಸಿ ಕಳೆದ ಐದು ವರ್ಷಗಳಿಂದ ದೊಡ್ಡದಾಗಿದ್ದ ಗುಂಡಿಯನ್ನು ಮುಚ್ಚಿದ್ದಾರೆ. ಹಾಳಾದ ಇಂಟರ್‌ಲಾಕ್‌ಗಳನ್ನು ಬದಲಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದುರಸ್ತಿ ಕೆಲಸ ಪೂರ್ಣಗೊಂಡಿರುವುದನ್ನು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ಸ್ಥಳೀಯರು ಸಾಕಷ್ಟು ಬಾರಿ ದೂರು ಕೊಟ್ಟು, ಇದೀಗ ಸಂಪರ್ಕ ರಸ್ತೆ ಮಧ್ಯೆ ಇರುವ ಗುಂಡಿ ಮುಚ್ಚಿದೆ. ಇದಕ್ಕಾಗಿ ಈ ಮಾರ್ಗವಾಗಿ ಹಾದು ಹೋಗುವವರು, ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಸಕರ ಶೀಘ್ರ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss