Saturday, July 2, 2022

Latest Posts

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವಿರೋಧ ಆಯ್ಕೆ

ಉಡುಪಿ: ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಕೊಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ (ಎ) ಮೀಸಲಾತಿ ಬಂದಿದ್ದು, ಪರ್ಕಳ ವಾರ್ಡ್‌ನಿಂದ ಮೂರನೇ ಬಾರಿ ಸದಸ್ಯೆಯಾಗಿ ಆಯ್ಕೆಯಾದ ಸುಮಿತ್ರಾ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದು, ಕೊಳ ವಾರ್ಡ್‌ನಿಂದ ಮೊದಲ ಬಾರಿಗೆ ನಗರಸಭಾ ಸದಸ್ಯೆಯಾಗಿ ಚುನಾಯಿತರಾದ ಲಕ್ಷ್ಮೀ ಮಂಜುನಾಥ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಗುರುವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಅವರು ನಡೆಸಿಕೊಟ್ಟರು. ನಗರಸಭೆ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್ ಇದ್ದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಎರಡು ವರ್ಷಗಳ ನಂತರ ನಗರ ಸಭೆಯ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ ಹಾಗೂ ಸದಸ್ಯರ ಪ್ರಮಾಣವಚನ ಸ್ವೀಕಾರ ನಡೆದಿದೆ. ಎಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವದ ಅಡಿಯಲ್ಲಿ ಉಡುಪಿ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸೋಣ ಎಂದರು. ನೂತನ ಅಧ್ಯಕ್ಷೆ-ಉಪಾಧ್ಯಕ್ಷೆ ಹಾಗೂ ನಗರಸಭೆಯ ಎಲ್ಲ ಸದಸ್ಯರಿಗೆ ಶುಭಾಶಯ ಕೋರಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಗರಸಭೆಯ ನೂತನ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರು, ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಗಮನ ನೀಡಲಾಗುವುದು. ಉಡುಪಿಯನ್ನು ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡುವ ಗುರಿ ಹೊಂದಲಾಗಿದೆ. ದಾರಿದೀಪ, ಸ್ವಚ್ಛತೆ, ನೀರಿನ ಸಂಪರ್ಕ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಿ, ಸಾರ್ವಜನಿಕರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಸಾರ್ವಜನಿಕ ಭೇಟಿಗೆ ಸಮಯವನ್ನೂ ನಿಗದಿಪಡಿಸಲಾಗುವುದು. ಯಾವುದೇ ಸನ್ಮಾನ ಸಮಾರಂಭಗಳಿಗೆ ಆಸ್ಪದ ನೀಡದೇ ತ್ವರಿತಗತಿಯಲ್ಲಿ ಮಾದರಿ ನಗರಸಭೆಯನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ನಗರಸಭೆ ಸದಸ್ಯರಾದ ಪ್ರಭಾಕರ ಪೂಜಾರಿ, ರಮೇಶ್ ಕಾಂಚನ್, ವಿಜಯ್ ಕೊಡವೂರು, ಶ್ರೀಕೃಷ್ಣ ರಾವ್ ಕೊಡಂಚ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಸಾಲ್ಯಾನ್ ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರಸಭೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss