ಉಡುಪಿ: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಳೆ ಹಣ್ಣು ಮತ್ತು ಮೀನು ಸಾಗಾಟ ನಡೆಸುತ್ತಿದ್ದ ಪಿಕ್ಅಪ್ ವಾಹನಗಳೆರಡು ಸರಣಿ ಅಪಘಾತಕ್ಕೀಡಾದ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಮೂಳೂರು ಸರ್ವೇಶ್ವರ ಬೊಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಬಳಿಯ ರಾ.ಹೆ. 66ರಲ್ಲಿ ಶಿವಮೊಗ್ಗದಿಂದ ಮಂಗಳೂರಿನತ್ತ ಬಾಳೆಹಣ್ಣು ಹೇರಿಕೊಂಡು ಸಾಗುತ್ತಿದ್ದ ಪಿಕ್ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ನಡುವೆ ಪಲ್ಟಿಯಾಗಿದೆ. ಇದೇ ಸಂದರ್ಭ ಮೀನು ತುಂಬಿಸಿಕೊಂಡು ಮುಲ್ಕಿ ಕಡೆಗೆ ಸಾಗುತ್ತಿದ್ದ ವಾಹನವು ರಸ್ತೆಯಲ್ಲಿ ಮಗುಚಿ ಬಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಶಿವಮೊಗ್ಗದಿಂದ ಬಂದ ಹಣ್ಣಿನ ವಾಹನದ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸರಣಿ ಅಪಘಾತ ನಡೆದಿದ್ದರಿಂದ ರಸ್ತೆಗೆ ಅಡ್ಡಲಾಗಿ ಪಿಕ್ಅಪ್ ವಾಹನ ಬಿದ್ದಿದ್ದರೆ, ಬಾಳೆ ಹಣ್ಣು ಚೆಲ್ಲಾಪಿಲ್ಲಿಯಾಗಿದೆ. ಪರಿಣಾಮ ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿದ್ದು, ಪೊಲೀಸರೊಂದಿಗೆ ಸ್ಥಳೀಯ ಯುವಕರು ರಸ್ತೆ ತೆರವುಗೊಳಿಸಲು ಸಹಕರಿಸಿದ್ದಾರೆ.