ಹೊಸದಿಗಂತ ವರದಿ, ಉಡುಪಿ:
ಒಂದೊಮ್ಮೆ ನಕ್ಸಲ್ ಬಾಧಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರು ತಾವು ಜವಾಬ್ದಾರಿಯುತ ನಾಗರಿಕರು ಎಂದು ಸಾಬೀತುಪಡಿಸಿದ್ದಾರೆ.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾ.ಪಂ. ವ್ಯಾಪ್ತಿಯ ಸೋಮೇಶ್ವರ ಪೇಟೆಯ ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ತೆರೆದ ಮತಗಟ್ಟೆಯನ್ನು ಸೂಕ್ಷ್ಮ ಮತಗಟ್ಟೆಯೆಂದು ಗುರುತಿಸಲಾಗಿದೆ. ಇಲ್ಲಿ ಒಟ್ಟು 662 ಮತದಾರರು ಪಟ್ಟಿಯಲ್ಲಿದ್ದಾರೆ. ಬೆಳಗ್ಗೆ 11.30ರ ವೇಳೆಗೆ 337 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಂದರೆ ನಾಲ್ಕುವರೆ ತಾಸುಗಳಲ್ಲಿಯೇ ಶೇ. 50.9ರಷ್ಟು ಮತದಾನ ನಡೆದಿದೆ.
ನಾಡ್ಪಾಲು ಗ್ರಾ.ಪ್ರ. ವ್ಯಾಪ್ತಿಯ ಕಾಸನಮಕ್ಕಿ ಸ.ಹಿ. ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಧ್ಯಾಹ್ನ 12.15ರ ಸುಮಾರಿಗೆ 722 ಮತದಾರರಲ್ಲಿ 428 ಮಂದಿ ಮತಚಲಾಯಿಸಿದ್ದಾರೆ. ಈ ಮತಗಟ್ಟೆಯಲ್ಲಿ ಶೇ. 59.27ರಷ್ಟು ಮತದಾನ ದಾಖಲಾಗಿದೆ.