ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ನಿಸರ್ಗ ಚಂಡ ಮಾರುತ ಹಾಗೂ ನೈರುತ್ಯ ಮಾರುತಗಳ (ಮುಂಗಾರು) ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರ ನೀಡಿದೆ. ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿಂದು ಬಲವಾದ ಗಾಳಿ ಬೀಸುವ ಜೊತೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ. ಮಿಂಚು, ಗುಡುಗು ಮತ್ತು ಸಿಡಿಲಿನೊಂದಿಗೆ ಜಿಲ್ಲೆಯ ಹಲವೆಡೆ ಮಳೆಯಾಗಲಿದೆ. ಜೂ. 3ರ ಬೆಳಗ್ಗೆ 8.30ರ ವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರತ್ಯೇಕ ಪ್ರದೇಶಗಳಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ. ಮಳೆ ಸುರಿಯುವ ಸಾಧ್ಯತೆಗಳಿವೆ.
ಉಡುಪಿ ಜಿಲ್ಲೆಯಲ್ಲಿ ಜೂ. 4ರ ಬೆಳಗ್ಗೆ 8.30ರ ವರೆಗೆ ಭಾರೀ ಗಾಳಿ ಬೀಸಿ, ಗುಡುಗು ಮಿಂಚಿನೊಂದಿಗೆ ವರ್ಷಧಾರೆಯಾಗಲಿದ್ದು, ಹಳದಿ ಅಲರ್ಟ್ ಘೋಷಣೆಯಾಗಿದೆ. ಈ ಅವಧಿಯಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಮಳೆ ಸುರಿಯುವ ಸಾಧ್ಯತೆಗಳಿವೆ. ಜೂ. 4ರಂದು ಕೂಡ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಮುಂದಿನ ಎರಡು ದಿನಗಳ ಕಾಲ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಒಂದು ತಾಸಿಗೆ 30-40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಜೂ. 5ರ ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.