ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನಲ್ಲಿ ಟಿಪ್ಪರ್ ಲಾರಿಯೊಂದು ನೀರಿನ ಹೊಂಡಕ್ಕೆ ಮಗುಚಿ ಬಿದ್ದು, ಚಾಲಕ ಸಹಿತ ಇಬ್ಬರು ಮೃತಪಟ್ಟ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ.
ಲಾರಿ ಚಾಲಕ ಕಾರ್ಕಳ ಗಣಿತನಗರದ ನಿವಾಸಿ ಅರುಣ್ಕುಮಾರ್ (40) ಹಾಗೂ ಲಾರಿಯಲ್ಲಿದ್ದ ಮತ್ತೋರ್ವ ತರುಣ ಕಿಶೋರ್ (18) ಮೃತ ಪಟ್ಟವರಾಗಿದ್ದಾರೆ.
ಜಾರ್ಕಳದ ಸುಧಾಕರ್ ಅವರ ಮಾಲೀಕತ್ವದ ಲಾರಿಯನ್ನು ಚಾಲಕ ಅರಣ್ಕುಮಾರ್ ಅವರು ಶುಕ್ರವಾರ ಸಂಜೆ 6ಗಂಟೆ ಸುಮಾರಿಗೆ ಮಣ್ಣು ತರಲೆಂದು ಕೊಂಡೊಯ್ಯುತ್ತಿದ್ದರು. ಲಾರಿಯಲ್ಲಿ ಕಿಶೋರ್ ಎಂಬವರು ಕೂಡ ಇದ್ದರು. ನಿಂಜೂರು ಗ್ರಾಮದ ಮದಗ ಎಂಬಲ್ಲಿ ರಸ್ತೆಯಿಂದ ಪಕ್ಕಕ್ಕೆ ಸರಿದ ಲಾರಿ, ನಿಯಂತ್ರಣ ತಪ್ಪಿ ನೀರು ತುಂಬಿದ ಮದಗಕ್ಕೆ ಮಗುಚಿ ಬಿದ್ದಿದೆ. ಮಗುಚಿ ಬಿದ್ದ ಲಾರಿಯಿಂದ ಇಬ್ಬರಿಗೂ ಹೊರಬರಲಾರದೇ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.