ಉಡುಪಿ: ಸರ್ಕಾರ ರಿಕ್ಷಾ ಚಾಲಕರಿಗೆ ಘೋಷಿಸಿದ ಲಾಕ್ ಡೌನ್ ಪರಿಹಾರ ಧನದ ಸುತ್ತೋಲೆಯಲ್ಲಿ ಬ್ಯಾಡ್ಜ್ ನಂಬರ್ ನೀಡುವಂತೆ ಸೂಚಿಸಿದ್ದು, ಇದರಿಂದ ಸಾವಿರಾರು ಮಂದಿ ರಿಕ್ಷಾ ಚಾಲಕರು ಈ ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬ್ಯಾಡ್ಜನ್ನು ಕಡ್ಡಾಯಗೊಳಿಸದೇ ರಿಕ್ಷಾ ಚಾಲಕರ ಪರವಾನಗಿ ಇರುವ ಎಲ್ಲ ರಿಕ್ಷಾದವರಿಗೂ ಪರಿಹಾರ ನೀಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕವು ಆಗ್ರಹಿಸಿದೆ.
ನಮ್ಮ ರಾಜ್ಯದಲ್ಲಿ ಅನೇಕ ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳು ರಿಕ್ಷಾಗಳಲ್ಲಿ ದುಡಿಯುತ್ತಿದ್ದಾರೆ. ಮಾತ್ರವಲ್ಲದೇ ಅನೇಕ ಆಟೋ ರಿಕ್ಷಾ ಮಾಲಕರಲ್ಲಿ ಬ್ಯಾಡ್ಜ್ ಇದ್ದು, ಚಾಲಕರಲ್ಲಿ ಇರುವುದಿಲ್ಲ. ಶೇ. 75ರಷ್ಟು ರಿಕ್ಷಾ ಚಾಲಕರಲ್ಲಿ ಬ್ಯಾಡ್ಜ್ ಇಲ್ಲ. ಸರ್ಕಾರ ಕೂಡಲೇ ಈ ಬ್ಯಾಡ್ಜ್ ಕಡ್ಡಾಯವನ್ನು ರದ್ದುಗೊಳಿಸಿ ಪರವಾನಗಿ ಇರುವ ಎಲ್ಲ ರಿಕ್ಷಾ ಚಾಲಕರಿಗೆ ಪರಿಹಾರವನ್ನು ನೀಡುವಂತೆ ಮುಖ್ಯಮಂತ್ರಿಯವರಿಗೆ ಒತ್ತಾಯಿಸಲಾಗಿದೆ.
ಕಳೆದ 50 ದಿನಗಳಿಂದ ರಿಕ್ಷಾ ಚಾಲಕರು ದುಡಿಮೆ ಇಲ್ಲದೆ, ಅವರ ಜೀವನ ನಿರ್ವಹಣೆಗೆ ಬಹಳ ತೊಂದರೆ ಉಂಟಾಗಿದೆ. ಹಾಗಾಗಿ ಸರ್ಕಾರವು ಲಾಕ್ ಡೌನ್ ಪರಿಹಾರದಲ್ಲಿ ಯಾವುದೇ ತಾರತಮ್ಯ ತೋರದೆ ಪರವಾನಗಿ ಇರುವ ಎಲ್ಲ ರಿಕ್ಷಾ ಚಾಲಕರಿಗೂ ಪರಿಹಾರ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕವು ಸರ್ಕಾರವನ್ನು ಒತ್ತಾಯಿಸಿದೆ.