Sunday, August 14, 2022

Latest Posts

ಉಡುಪಿ | ಪೆರಂಪಳ್ಳಿ ಪಾಸ್ ಕುದ್ರುವಿನಲ್ಲಿ ಕಾರ್ಯಾಚರಣೆ ಆರಂಭಿಸಿದ ಎನ್‌ಡಿಆರ್‌ಎಫ್

ಉಡುಪಿ: ಸುಮಾರು ದಶಕಗಳ ನಂತರ ಉಡುಪಿ ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಗೆ ಜಲಪ್ರಳಯ ಉಂಟಾಗಿದೆ. ನೂರಾರು ಮನೆಗಳು ಜಲಾವೃತವಾಗಿದ್ದು, ಅಪಾಯದಲ್ಲಿ ಸಿಲುಕಿದ ನಾಗರಿಕರ ರಕ್ಷಣಾ ಕಾರ್ಯಾಚರಣೆಗೆ ಮಂಗಳೂರಿನ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.

ಸ್ವರ್ಣಾ ನದಿಯ ತಡದಲ್ಲಿರುವ ಪೆರಂಪಳ್ಳಿ ಪಾಸ್ ಕುದ್ರುವಿನಲ್ಲಿ ಸಿಲುಕಿದ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ಬೋಟುಗಳು ಹಾಗೂ ಜೀವ ರಕ್ಷಣಾ ಸಾಧನಗಳೊಂದಿಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡವು ಕಾರ್ಯಾಚರಣೆ ಆರಂಭಿಸಿದೆ.

ಉಡುಪಿ ಶಾಸಕ ರಘುಪತಿ ಭಟ್ ಸಹಿತ ಜಿಲ್ಲಾಡಳಿತ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿ, ಸಹಕರಿಸುತ್ತಿದ್ದಾರೆ.
ಸ್ವರ್ಣಾ ನದಿಯ ಪಾತ್ರದಲ್ಲಿರುವ ಅಮ್ಮುಂಜೆ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಪುತ್ತಿಗೆ ಮೊದಲಾದ ಕಡೆಗಳಲ್ಲಿ ಜನ ಜಾನುವಾರು ಅಪಾಯದಲ್ಲಿದ್ದಾರೆ. ಮಡಿಸಾಲು ಹೊಳೆಯ ಇಕ್ಕೆಲಗಳಲ್ಲಿ ಉಪ್ಪೂರು ಸಹಿತ ಕುದ್ರು ಪ್ರದೇಶಗಳಲ್ಲಿ ಜನರು ನೆರೆಗೆ ಸಿಲುಕಿಕೊಂಡಿದ್ದಾರೆ.

ಉಡುಪಿ ನಗರದ ಬೈಲಕೆರೆ, ಮಠದ ಬೆಟ್ಟು, ಬನ್ನಂಜೆ, ನಿಟ್ಟೂರು, ಬಡಗಪೇಟೆ, ಕಲ್ಸಂಕ, ಕೊಡವೂರು, ಶಿರಿಬೀಡು, ಕಲ್ಮಾಡಿ ಮುಂತಾದ ಕಡೆಗಳಲ್ಲಿ ಜಲಾವೃತವಾಗಿದ್ದು ನೂರಾರು ಮನೆಗಳವರು ಅಪಾಯದಲ್ಲಿದ್ದಾರೆ. ಇತ್ತ ಉದ್ಯಾವರ ಪಾಪನಾಶಿನಿ ಹೊಳೆಯೂ ಉಕ್ಕಿ ಹರಿಯುತ್ತಿದ್ದು, ಮಠದ ಕುದ್ರು, ಬೊಳ್ಜೆ, ಉದ್ಯಾವರದ ನಾಗರಿಕರು ನೆರೆಯಿಂದ ಸಂತ್ರಸ್ತರಾಗಿದ್ದಾರೆ. ಜಿಲ್ಲಾಡಳಿತ ಎನ್‌ಡಿಆರ್‌ಎಫ್, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss