Sunday, June 26, 2022

Latest Posts

ಪೇಜಾವರ ಮಠದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಕಾರ್ಯಾಲಯ ಉದ್ಘಾಟನೆ

ಹೊಸದಿಗಂತ ವರದಿ, ಉಡುಪಿ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಸಹಕಾರದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉಡುಪಿಯ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಕಾರ್ಯಾಲಯ ಉದ್ಘಾಟಿಸಿ, ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆಯ ಜನ್ಮಭೂಮಿಯನ್ನು ಹಿಂದುಗಳಿಗೆ ಕೊಟ್ಟಿದೆ. ಅಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಬೇಕಾದ ನಿಧಿಯ ಸಂಗ್ರಹ ಕಾರ್ಯ ಈಗ ನಡೆಯುತ್ತಿದೆ. ಯಾರಿಗೂ ತಾವು ಮಂದಿರ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ದುಃಖ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಕನಿಷ್ಠ 10ರೂ., ಕುಟುಂಬವೊಂದು 100 ರೂ. ನೀಡಲು ಯೋಜನೆ ರೂಪಿಸಿ, ಅದಕ್ಕೂ ಹೆಚ್ಚಿನ ದೇಣಿಯನ್ನೂ ನೀಡಬಹುದು ಎಂದು ಹೇಳಿದರು.

ವಿಹಿಂಪ ಪ್ರಾಂತೀಯ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಅಯೋಧ್ಯೆಯ ರಾಮ ಮಂದಿರ ಎಂದರೆ ಇಡೀ ದೇಶ, ರಾಷ್ಟ್ರಕ್ಕೆ ಸಲ್ಲುವ ಗೌರವ. ಇಡೀ ಹಿಂದು ಸಮಾಜದ ಶ್ರದ್ಧೆ, ಪ್ರೇಮದ ದೇವಸ್ಥಾನವಾಗಬೇಕು. ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬ ಬಂಧುವೂ ಪಾಲ್ಗೊಳ್ಳಬೇಕು. ಈ ಭಾಗದಲ್ಲಿ ಜ. 15ರಿಂದ ಫೆ. 5ರೊಳಗೆ 22 ದಿನಗಳಲ್ಲಿ ಈ ಅಭಿಯಾನ ಪೂರ್ಣಗೊಳಿಸಿ, ನಂತರ ಲೆಕ್ಕಪತ್ರ ಸಿದ್ಧಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಚಾಲಕ್ ಡಾ. ನಾರಾಯಣ ಶೆಣೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನ್ ಅಖಿಲಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಡಾ.ವಾದಿರಾಜ ಭಟ್, ವಿಹಿಂಪ ವಿಭಾಗ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮೊದಲಾದವರಿದ್ದರು.

ವಿ.ಹಿಂ.ಪ. ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ವಂದಿಸಿದರು. ಮಾತೃಮಂಡಳಿ ಅಧ್ಯಕ್ಷೆ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss