ಉಡುಪಿ: ಕಳೆದ ಆರು ದಿನಗಳಿಂದ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಟ್ರಸ್ಟ್ ಸಹಭಾಗಿತ್ವದಲ್ಲಿ ಓಡಿಸುತ್ತಿರುವ ಉಚಿತ ಸಿಟಿ ಬಸ್ಸುಗಳಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಮಾತ್ರವಲ್ಲ, ಅದನ್ನು ರೂಢಿ ಮಾಡಿಸುವ ಪ್ರಯತ್ನ ನಡೆದಿದೆ.
ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಸುರಕ್ಷಿತವಾಗಿ ಬಳಸಲು ಕಲಿಸಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಬಳಸುವುದು, ವ್ಯಕ್ತಿಗತ ಅಂತರ, ಜೊತೆಗೆ ಪ್ರತೀ ಟ್ರಿಪ್ ನಂತರ ಬಸ್ಸುಗಳಿಗೆ ಸೋಂಕು ನಿವಾರಕ ದ್ರವ ಸಿಂಪಡಣೆ ಮಾಡುವುದು, ಟಿಕೆಟ್ಗೆ ದುಡ್ಡು ಕೊಡುವ ಬದಲು ಚಲೋ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಬಳಕೆ ಮೊದಲಾದ ನವೀನ ಸಂಗತಿಗಳೀಗ ಸಿಟಿ ಬಸ್ಸುಗಳಲ್ಲಿವೆ. ಇವೆಲ್ಲದರ ಜೊತೆಗೆ ಸಿಟಿ ಬಸ್ಸು ನಿಲ್ದಾಣವನ್ನು ಪ್ರತಿನಿತ್ಯ ಸಾಬೂನಿನ ಹುಡಿ ಬಳಸಿ ತೊಳೆದು, ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ.
ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಉಡುಪಿ ನಗರದಲ್ಲಿ ಸಾರ್ವಜನಿಕ ಬಸ್ಸು ಸಂಚಾರಕ್ಕೆ ಮರು ಜೀವ ನೀಡಲು ಒಂದು ವಾರದ ಪ್ರಾಯೋಗಿಕ ಉಚಿತ ಬಸ್ಸು ಸಂಚಾರವನ್ನು ಸಾರ್ವಜನಿಕರು ಮುಕ್ತವಾಗಿ ಅನುಮೋದಿಸಿದ್ದಾರೆ. ಕೋವಿಡ್-19 ಭೀತಿಯ ನಡುವೆಯೂ ಜನ ಉತ್ತಮ ಸ್ಪಂದನೆ ನೀಡುತ್ತಿದ್ದು, ಇದಕ್ಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪ್ರಯಾಣಿಕರ ಸಂಖ್ಯೆಯೇ ಸಾಕ್ಷಿ ಹೇಳುತ್ತಿದೆ.
ಈ ಮಧ್ಯೆ ಸಿಟಿ ಬಸ್ಸು ಸಂಚಾರವು ಭವಿಷ್ಯದಲ್ಲಿ ಸಾರ್ವಜನಿಕ ಬಸ್ಸು ಸಂಚಾರ ಯಾವ ರೀತಿಯಲ್ಲಿ ನಡೆಯಬೇಕು ಎಂಬುದನ್ನು ಸಾರಿಗೆ ಉದ್ಯಮಕ್ಕೆ ತೋರಿಸಿ ಕೊಟ್ಟ ಹೆಗ್ಗಳಿಕೆ ಶಾಸಕರ ನೇತೃತ್ವದ ತಂಡಕ್ಕೆ ಸಲ್ಲುತ್ತದೆ. ಸಾರ್ವಜನಿಕ ಗಣೇಶೋತ್ಸವ ಕಡಿಯಾಳಿ ಇದರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಅವರ ನೇತೃತ್ವದಲ್ಲಿ ಪ್ರತೀ ಬಸ್ಸಿನಲ್ಲಿಯೂ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಾಕ್ಡೌನ್ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬ ಪ್ರಯಾಣಿಕನ ಮಾಹಿತಿ ನೋಂದಣಿಯಾಗುತ್ತಿದೆ. ಪ್ರತಿಯೊಂದು ನಿಯಮಗಳು ಅತ್ಯಂತ ಶಿಸ್ತಿನಿಂದ ಪಾಲನೆಯಾಗುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಟಿ ಬಸ್ಸುಗಳ ಸಂಚಾರದ ಉಚಿತ ಸೇವೆ ಇಂದು ಸಂಜೆ 7ಗಂಟೆಗೆ ಮುಕ್ತಾಯಗೊಳ್ಳಲಿದೆ. ನಾಳೆ ಭಾನುವಾರದ ಕಟ್ಟುನಿಟ್ಟಿನ ಲಾಕ್ಡೌನ್ ಇದ್ದು, ಸಾರ್ವಜನಿಕ ಸಾರಿಗೆಗೂ ಅನ್ವಯಿಸುತ್ತದೆ. ಜೂನ್ 1ರಿಂದ ಸಿಟಿ ಬಸ್ಸು ಮಾಲಕರ ಸಂಘವೇ ಬಸ್ಸುಗಳನ್ನು ಓಡಿಸಲಿದ್ದು, ಉಚಿತ ಸೇವೆ ಇರುವುದಿಲ್ಲ.