ಉಡುಪಿ: ಚೌತಿಯ ದಿನವೂ ಮೋದಕ ತಿಂದು ವಿರಮಿಸದ ಉಡುಪಿ ಡಿಸಿಐಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 49 ಕೆ.ಜಿ.ಗೂ ಅಧಿಕ ಪ್ರಮಾಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿ ಇಲ್ಲಿಯವರೆಗಿನ ಮಾದಕದ್ರವ್ಯ ಪ್ರಕರಣಗಳಲ್ಲಿ ಅತ್ಯಧಿಕ ಪ್ರಮಾಣದ ಗಾಂಜಾ ಪತ್ತೆ ಹಚ್ಚಿದ ಪ್ರಕರಣವೂ ಆಗಿದೆ.
ಪ್ರಕರಣದಲ್ಲಿ ಕರುತಪಾಂಡಿ ಮತ್ತು ವಾನು ಹಲ್ ದಾರ್ ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರೂ ಉತ್ತರಪ್ರದೇಶ ನೋಂದಾಯಿತ ಕಂಟೈನರ್ ಲಾರಿಯಲ್ಲಿ ಅಪಾರ ಪ್ರಮಾಣದ ಗಾಂಜಾವನ್ನು ಸಾಗಿಸುತ್ತಿದ್ದರು.
ಬಿದಿರು ಕೋಲಿನಲ್ಲಿ ಬಚ್ಚಿಡಲಾಗಿತ್ತು ಗಾಂಜಾ: ಖಚಿತ ಮಾಹಿತಿಯಂತೆ ಡಿಸಿಐಬಿ ಪೊಲೀಸ್ ಘಟಕದ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಮತ್ತವರ ತಂಡ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಬಳಿ ಕೆವಿಕೆ ಕ್ರಾಸ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಉಡುಪಿಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಯುಪಿ 21 ಸಿಎನ್ 7542 ನೋಂದಣಿ ಸಂಖ್ಯೆಯ ಲಾರಿ ಬಂದಿದೆ. ಕಂಟೈನರ್ ಲಾರಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬಿದಿರಿನ ಕೋಲುಗಳು ಸಿಕ್ಕಿವೆ.
ಕಂಟೈನರಿನಲ್ಲಿ ಬಿದಿರು ನೋಡಿದ ಪೊಲೀಸರು ಅನುಮಾನಗೊಂಡು ಚಾಲಕ ಮತ್ತು ನಿರ್ವಾಹಕನನ್ನು ವಿಚಾರಿಸಿದ್ದಾರೆ. ಇಬ್ಬರೂ ಕಕ್ಕಾಬಿಕ್ಕಿಯಾಗಿದ್ದನ್ನು ಕಂಡು ಪೊಲೀಸರು ಕಂಟೈನರ್ ಲಾರಿಯ ಬಾಗಿಲು ತೆರೆದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೆಲ ಬಿದಿರು ಕೋಲುಗಳನ್ನು ಒಡೆದು ನೋಡಿದ್ದಾರೆ. ಈ ಸಂದರ್ಭದಲ್ಲಿ ಸತ್ಯಾಂಶ ಬಹಿರಂಗವಾಗಿದೆ. 6 ಬಿದಿರುಗಳಲ್ಲಿ ಬಚ್ಚಿಟ್ಟಿದ್ದ ಗಾಂಜಾದ ಪ್ಯಾಕೆಟ್ ಗಳು ಸಿಕ್ಕಿವೆ.
44.95ಲಕ್ಷ ರೂ. ಮೌಲ್ಯದ ಸ್ವತ್ತು ವಶ: ಲಾರಿ ಕಂಟೈನರಿನಲ್ಲಿ 49.150 ಕೆ.ಜಿ. ಪ್ರಮಾಣದ ಗಾಂಜಾ ಸಿಕ್ಕಿದೆ. ಇದರ ಮೌಲ್ಯ 14.75 ಲಕ್ಷ ರೂ. ಆಗಿದೆ. ಅಲ್ಲದೇ 30 ಲಕ್ಷ ರೂ. ಮೌಲ್ಯದ ಲಾರಿ ಹಾಗೂ 20ಸಾವಿರ ರೂ. ಮೊತ್ತದ ಮೊಬೈಲ್ ಹ್ಯಾಂಡ್ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ಸಿಬ್ಬಂದಿಯವರಾದ ಎಎಸ್ಐ ರವಿಚಂದ್ರ, ಸಂತೋಷ್ ಕುಂದರ್, ರಾಘವೇಂದ್ರ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ್, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಮತ್ತು ಚಾಲಕ ರಾಘವೇಂದ್ರ ಅವರು ಪಾಲ್ಗೊಂಡಿದ್ದರು.