Saturday, August 13, 2022

Latest Posts

ಉಡುಪಿ: ಭತ್ತದ ಕೃಷಿಕರಿಗೆ ಕೊಂಚ ಮೋಸ ಮಾಡಿದ ಜುಲೈ ಮಳೆ

ಉಡುಪಿ: ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿಸುವ ಪುನರ್ವಸು ಮತ್ತು ಪುಷ್ಯ ನಕ್ಷತ್ರಗಳು ಈ ಬಾರಿ ಭತ್ತದ ಕೃಷಿಕರಿಗೆ ಕೊಂಚ ಮೋಸ ಮಾಡಿವೆ. ಈ ಅವಧಿಯಲ್ಲಿ ಸುರಿಯಬೇಕಿದ್ದಕ್ಕಿಂತ ಶೇ. 18.2ರಷ್ಟು ಕಡಿಮೆ ವರ್ಷಧಾರೆಯಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಘಟಕದ ಅಂಕಿ ಅಂಶಗಳ ಆಧಾರದಂತೆ ಉಡುಪಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸರಾಸರಿ 1448.3 ಮಿ.ಮೀ. ವಾಡಿಕೆ ಮಳೆ ಬೀಳಬೇಕು. ಆದರೆ ವಾಸ್ತವದಲ್ಲಿ ಸರಾಸರಿ 1184ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ 264.3 ಮಿ.ಮೀ. ಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1405.4 ಮಿ.ಮೀ. ಮಳೆ ಸುರಿದಿತ್ತು. ಅದಕ್ಕೆ ಹೋಲಿಸಿದರೆ 261.4 ಮಿ.ಮೀ ಕಡಿಮೆ ಮಳೆಯಾಗಿದೆ.

ಏಳು ತಾಲೂಕಿನಲ್ಲಿ ಮೂರರಲ್ಲಿ ಅಧಿಕ ಮಳೆ
ಉಡುಪಿ ಜಿಲ್ಲೆಯಲ್ಲಿ ಈ ಮೊದಲು ಮೂರು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಲೆಕ್ಕಾಚಾರ ಮಾಡಲಾಗುತ್ತಿತ್ತು. ಈಗ ಹೊಸದಾಗಿ ರಚನೆ ಮಾಡಿದ ನಾಲ್ಕು ತಾಲೂಕುಗಳನ್ನೂ ಸೇರಿಸಿ, 7ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಮಳೆಯ ಪ್ರಮಾಣವನ್ನು ಅಳೆಯಲಾಗುತ್ತಿದೆ. ಅದರಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಉಳಿದ ನಾಲ್ಕು ತಾಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ.

ಹೆಬ್ರಿ ತಾಲೂಕಿನಲ್ಲಿ ಶೇ.51 ಮಳೆ ಖೋತಾ
ಮಲೆನಾಡು ತಪ್ಪಲಿನಲ್ಲಿರುವ ಮತ್ತು ಅತೀ ಹೆಚ್ಚು ಮಳೆಯಾಗಬೇಕಿದ್ದ ಹೆಬ್ರಿ ತಾಲೂಕಿನಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಇಲ್ಲಿ 1927 ಮಿ.ಮೀ. ವಾಡಿಕೆ ಮಳೆಯಾಗಿದ್ದರೆ, ಕೇವಲ 933 ಮಿ.ಮೀ. ಮಳೆ ಸುರಿದು ಶೇ. 51ರಷ್ಟು ಮಳೆ ಖೋತಾ ಆಗಿದೆ. ಕಾರ್ಕಳ ತಾಲೂಕಿನಲ್ಲಿ 1199 ಮಿ.ಮೀ. ಮಳೆಯಾಗಿದೆ. ಇಲ್ಲಿ 1503 ಮಿ.ಮೀ. ವಾಡಿಕೆ ಮಳೆಯಾಗಿದ್ದು, ಶೇ. 27ರಷ್ಟು ಕಡಿಮೆಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ 1271 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ, ಸುರಿದಿರುವುದು 1129 ಮಿ.ಮೀ. ಮಾತ್ರ. ಇದರಿಂದ ಶೇ. 11ರಷ್ಟು ಮಳೆ ಕೊರೆತೆಯಾಗಿದೆ. ಉಡುಪಿ ತಾಲೂಕಿನಲ್ಲಿ 1177 ಮಿ.ಮೀ. ಮಳೆಯಾಗಿದ್ದು, ವಾಡಿಕೆಯ 1214 ಮಿ.ಮೀ. ಮಳೆಗಿಂತ ಶೇ. 3ರಷ್ಟು ಕಡಿಮೆ ಬಿದ್ದಿದೆ.

ಕಾಪು ತಾಲೂಕಿನಲ್ಲಿ ವಾಡಿಕೆಗಿಂತ ಜಾಸ್ತಿ
ಜಿಲ್ಲೆಯ ಕಾಪು ತಾಲೂಕಿನಲ್ಲಿ ಶೇ. 8ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಇಲ್ಲಿ 1153ಮಿ.ಮೀ. ವಾಡಿಕೆ ಮಳೆಯಾಗಬೇಕು, ಆದರೆ ಜುಲೈ ತಿಂಗಳಲ್ಲಿ ಸುರಿದ ಮಳೆ 1250 ಮಿ.ಮೀ. ಆಗಿದೆ. ಕುಂದಾಪುರ ತಾಲೂಕಿನಲ್ಲಿ 1220 ಮಿ.ಮೀ. ಮಳೆ ಸುರಿದಿದೆ. ವಾಡಿಕೆಯ 1179 ಮಿ.ಮೀ.ಗಿಂತ ಶೇ. 3ರಷ್ಟು ಹೆಚ್ಚು ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ 1442 ಮಿ.ಮೀ. ಮಳೆಯಾಗಿದ್ದು, 1389 ಮಿ.ಮೀ. ವಾಡಿಕೆ ಮಳೆಯ ಶೇ. 4ರಷ್ಟು ಅಧಿಕ ಮಳೆ ಬಿದ್ದಿದೆ.

ಸಾಮಾನ್ಯವಾಗಿ ಜುಲೈ ತಿಂಗಳು ಅತೀ ಹೆಚ್ಚು ಮಳೆಯಾಗುವ ಕಾಲ. ಅತೀ ಹೆಚ್ಚು ಮಳೆ ತರಿಸುವ ಪುನರ್ವಸು ಮತ್ತು ಪುಷ್ಯ ನಕ್ಷತ್ರಗಳಿರುವುದು ಇದೇ ತಿಂಗಳಲ್ಲಿ. ಯಾವತ್ತು ಮಳೆಯಾಗದಿದ್ದರೂ ಈ ಎರಡು ನಕ್ಷತ್ರಗಳಲ್ಲಿ ಮಳೆ ಸುರಿದೇ ಸುರಿಯುತ್ತದೆ ಎಂಬುದು ಗ್ರಾಮೀಣರ ನಂಬಿಕೆ. ಅದರಂತೆ ತಿಂಗಳ ಮಧ್ಯದಲ್ಲಿ ಮಳೆಯಾಗದಿದ್ದರೂ ತಿಂಗಳಾರಂಭ ಮತ್ತು ಅಂತ್ಯದಲ್ಲಿ ಮಳೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss