ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷದಂತೆ ಭಾಗೀರಥಿ ಜನ್ಮದಿನದಂದು ಸೋಮವಾರ ರಾತ್ರಿ ರಥಬೀದಿಯಲ್ಲಿ ದೇವರಿಗೆ ಪಲ್ಲಕ್ಕಿಯ ಉತ್ಸವ ನಡೆದು ಮಧ್ವಸರೋವರದ ಭಾಗೀರಥಿ ಗುಡಿಯ ಮುಂದೆ ತೊಟ್ಟಿಲು ಪೂಜೆ ನಡೆಯಿತು. ನಂತರ ಅಷ್ಟಾವಧಾನ ನಡೆದು ಗರ್ಭಗುಡಿಯ ಒಳಗೆ ಉತ್ಸವಮೂರ್ತಿಯನ್ನು ಇರಿಸಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಭಾಗವಹಿಸಿದರು.
ಉಡುಪಿ ಕೃಷ್ಣಮಠದಲ್ಲಿ ಭಾಗೀರಥಿ ಜಯಂತಿಯಂದು ಕೃಷ್ಣನ ಉತ್ಸವಮೂರ್ತಿಯನ್ನು ಕಾರ್ತಿಕ ಮಾಸದಲ್ಲಿ ಉತ್ಥಾನದ್ವಾದಶಿಯಂದು ಹೊರತಂದು ನಿತ್ಯ ರಥೋತ್ಸವ ಆರಂಭವಾಗುತ್ತದೆ. ಬಳಿಕ ಮುಂದಿನ ಭಾಗೀರಥಿ ಜನ್ಮದಿನದ ವರೆಗೆ ರಥಬೀದಿಯಲ್ಲಿ ನಿತ್ಯೋತ್ಸವ ಇರುತ್ತದೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ಇದ್ದುದರಿಂದ ಕಳೆದ ಮಾ. 20ರಿಂದಲೇ ಕೃಷ್ಣಮಠದಲ್ಲಿ ಉತ್ಸವಗಳನ್ನು ಸ್ಥಗಿತಗೊಳಿಸಲಾಗಿತ್ತು.