ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 10.10ಕ್ಕೆ ಬಂದಿಳಿದ ವಿಮಾನದಲ್ಲಿ 53 ಮಂದಿ ಉಡುಪಿ ಜಿಲ್ಲೆಯ ಪ್ರಯಾಣಿಕರು ಆಗಮಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕಳೆದ ಐದು ದಿನಗಳಿಂದ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಮಂಗಳವಾರ ರಾತ್ರಿ 176 ಪ್ರಯಾಣಿಕರನ್ನು ಹೊತ್ತ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ವಿಮಾನದಲ್ಲಿದ್ದ ಉಡುಪಿ ಜಿಲ್ಲೆಯ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಉಡುಪಿ ಜಿಲ್ಲೆಗೆ ಬಂದಿದ್ದಾರೆ.
ಉಡುಪಿ ಜಿಲ್ಲೆಯ 53 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ 27 ಮಂದಿ ಪುರುಷರು ಮತ್ತು 26 ಮಂದಿ ಮಹಿಳೆಯರಿದ್ದಾರೆ. ಪೈಕಿ ಉಡುಪಿ ತಾಲೂಕಿನ 12, ಕುಂದಾಪುರ ತಾಲೂಕಿನ 14, ಬೈಂದೂರು ತಾಲೂಕಿನ 5, ಕಾಪು ತಾಲೂಕಿನ 16, ಕಾರ್ಕಳ ತಾಲೂಕಿನ ಮೂವರು ಮತ್ತು ಬ್ರಹ್ಮಾವರ ತಾಲೂಕಿನ ಮೂವರು ಸೇರಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರ ಕೈಗೆ ಮೊಹರು ಹಾಕಲಾಯಿತು. ಬಳಿಕ ತಡರಾತ್ರಿ 3 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯ 53 ಮಂದಿಯನ್ನು ಬಸ್ಸುಗಳಲ್ಲಿ ನೇರವಾಗಿ ಉಡುಪಿಗೆ ಕರೆತರಲಾಯಿತು. ವಿಮಾನದಲ್ಲಿ ಆಗಮಿಸಿದ ಜಿಲ್ಲೆಯ ಎಲ್ಲ ಪ್ರಯಾಣಿಕರು ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ಸ್ವೀಕಾರ ಕೇಂದ್ರದಲ್ಲಿ ಜಮಾವಣೆಯಾದರು.
44 ಮಂದಿ ಹೊಟೇಲುಗಳಲ್ಲಿ ದಿಗ್ಬಂಧನ: ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಬೋರ್ಡ್ ಹೈಸ್ಕೂಲಿನ ಉಡುಪಿ ತಾಲೂಕು ಸ್ವೀಕಾರ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲಾಯಿತು. ನಂತರ 44 ಮಂದಿಯನ್ನು ತಮ್ಮ ಇಚ್ಛೆಯಂತೆ ನಗರದಲ್ಲಿ ಗುರುತಿಸಲ್ಪಟ್ಟ ವಿವಿಧ ಹೊಟೇಲ್-ಲಾಡ್ಜ್ ಗಳಲ್ಲಿ ಹಾಗೂ ಉಳಿದ 9 ಮಂದಿಯನ್ನು ಹಾಸ್ಟೆಲ್ ಗಳಲ್ಲಿ ಸಾಂಸ್ಥಿಕ ದಿಗ್ಬಂಧನದಲ್ಲಿರಿಸಲಾಯಿತು.
ಕೇಂದ್ರದಲ್ಲಿ ನೋಡೆಲ್ ಅಧಿಕಾರಿ ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾರ್ಗದರ್ಶನದಲ್ಲಿ ಕಂದಾಯ ಮತ್ತು ಸರ್ವೇ ಇಲಾಖಾ ಸಿಬ್ಬಂದಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದರು.