ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಮೂವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 111ಕ್ಕೆ ಏರಿದೆ.
ಸರಕಾರಿ ದಿಗ್ಬಂಧನದಲ್ಲಿದ್ದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ತಲಾ ಒಂದು ಮಗು, ಮಹಿಳೆ ಮತ್ತು ಪುರುಷನಲ್ಲಿ ವೈರಸ್ ಕಂಡು ಬಂದಿದೆ. ಎಲ್ಲ ಮೂವರು ಕೂಡ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಒಂಭತ್ತು ವರ್ಷ ಪ್ರಾಯದ ಹೆಣ್ಣು ಮಗು, 30ರ ಹರೆಯದ ಮಹಿಳೆ ಮತ್ತು 27 ವರ್ಷ ಪ್ರಾಯದ ಯುವಕನಿಗೆ ನೋವೆಲ್ ಕೊರೋನಾ ವೈರಸ್ ದಾಳಿ ಮಾಡಿದೆ. ಎಲ್ಲರನ್ನು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 111 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಮುಂಬೈ ನಂಟು ಹೊಂದಿರುವ 89 ಪ್ರಕರಣಗಳಿದ್ದರೆ, 11 ಮಂದಿ ದುಬೈನಿಂದ ಬಂದವರಾಗಿದ್ದಾರೆ. ತೆಲಂಗಾಣದಿಂದ ಮರಳಿದ ಮೂವರಲ್ಲಿ, ಕೇರಳದಿಂದ ಬಂದ ಇಬ್ಬರಲ್ಲಿ ವೈರಸ್ ಪತ್ತೆಯಾಗಿದೆ. ಅಲ್ಲದೇ ಸ್ಥಳೀಯ 6 ಜನರಲ್ಲಿ ಕೋವಿಡ್ ಖಚಿತವಾಗಿದೆ.