ಉಡುಪಿ: ಕಳೆದ 41 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಮದ್ಯ ಮಾರಾಟ ಶುರುವಾಗಿದೆ. ಬೆಳಗ್ಗೆ 9 ಗಂಟೆಯಿಂದ
ಜಿಲ್ಲೆಯ 103 ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಮದ್ಯದಂಗಡಿಗಳ ಮುಂಭಾಗದಲ್ಲಿ ಪುರುಷರು, ಯುವಕರಷ್ಟೇ ಅಲ್ಲದೇ ಮಹಿಳೆಯರು, ಯುವತಿಯರು ಕೂಡ ಕಂಡು ಬಂದರು.
ಒಂದುವರೆ ತಿಂಗಳ ಕಾಲ ಮದ್ಯ ಸಿಗದೇ ಕಂಗಾಲಾಗಿದ್ದ ಜನ
ಸುಮಾರು ಒಂದುವರೆ ತಿಂಗಳ ಕಾಲ ಮದ್ಯ ಸಿಗದೇ ಕಂಗಾಲಾಗಿದ್ದ ಜನ ಮುಂಜಾನೆಯಿಂದಲೇ ಎಂಎಸ್ಐಎಲ್, ವೈನ್ ಶಾಪ್ಗಳ ಮುಂಭಾಗದಲ್ಲಿ ಕಾಯುತ್ತಿದ್ದ ದೃಶ್ಯ ಎಲ್ಲಡೆ ಕಂಡುಬರುತ್ತಿತ್ತು. ಬೆಳಗ್ಗೆ 9 ಗಂಟೆ ಆಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಶಾಪ್ಗಳ ಸೀಲ್ ಓಪನ್ ಮಾಡುವ ಸಂದರ್ಭ ಇಲಾಖೆ ಸಿಬ್ಬಂದಿ ಹಾಜರಿದ್ದರು. ಇಲಾಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲಾಯಿತು. ನಗರದ ಒಂದೆರಡು ಮಳಿಗೆಗಳಲ್ಲಿ 9ಗಂಟೆಯ ಮೊದಲೇ ಅರ್ಧ ಬಾಗಿಲು ತೆರೆದು ಗ್ರಾಹಕರಿಗೆ ಮದ್ಯ ನೀಡಲಾಗುತ್ತಿತ್ತು.
ಜಿಲ್ಲೆಯಲ್ಲಿ 14 ಎಂಎಸ್ಐಎಲ್ ಮಳಿಗೆ ಹಾಗೂ 89 ವೈನ್ಶಾಪ್ಗಳಲ್ಲಿ ನಿರಂತರವಾಗಿ ಮದ್ಯ ಮಾರಾಟವಾಗುತ್ತಿದೆ. ಖರೀದಿಗೆ ಬರುವ ಗ್ರಾಹಕರು ವ್ಯಕ್ತಿಗತ ಅಂತರವನ್ನು ಕಾಪಾಡಿಕೊಂಡು ಶಿಸ್ತಿನಿಂದ ಮಳಿಗೆ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಅದಕ್ಕಾಗಿ 6 ಅಡಿ ಅಂತರದಲ್ಲಿ ಗುರುತು ಮಾಡಲಾಗಿದೆ. ಸಾಲು ಬೆಳೆಯುತ್ತಲೇ ಮದ್ಯದಂಗಡಿಯ ಸಿಬ್ಬಂದಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸಹಕರಿಸುತ್ತಿದ್ದಾರೆ. ಹೆಚ್ಚಿನ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್!
ಮದ್ಯ ಮಾರಾಟ ಮಾಡುವವರು ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಮದ್ಯವನ್ನು ನೀಡುತ್ತಿದ್ದಾರೆ. ಇತ್ತ ಗ್ರಾಹಕರು ಕೂಡ ಮುಖಕ್ಕೆ ಮಾಸ್ಕ್ ಧರಿಸಿ ಬರುತ್ತಿದ್ದಾರೆ. ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ಸ್ಯಾನಿಟೈಸರ್ ನೀಡುತ್ತಿದ್ದಾರೆ. ನಗರದ ವೈನ್ ಗೇಟ್ ಮಳಿಗೆಯಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಕೂಪನ್ ತೆಗೆದುಕೊಂಡುವರು ಅರ್ಧ ತಾಸು ಬಿಟ್ಟು ಬಂದು ತಮ್ಮ ಆವಶ್ಯಕತೆಯ ಮದ್ಯವನ್ನು ಖರೀದಿಸಿಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿದೆ.