ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಸ್ಕತ್ ನಿಂದ ಬುಧವಾರ ರಾತ್ರಿ ಉಡುಪಿ ಜಿಲ್ಲೆಗೆ 21 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
ಮೂರನೇ ಸರದಿಯಲ್ಲಿ ಉಡುಪಿ ಜಿಲ್ಲೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಮಹಿಳೆಯರು 8 ಮಂದಿ ಹಾಗೂ ಪುರುಷರು 13 ಜನರಿದ್ದಾರೆ. ಈ ಪೈಕಿ ತಲಾ ಇಬ್ಬರು ಬಾಲಕರು ಮತ್ತು ಬಾಲಕಿಯರಿದ್ದು, 10 ವರ್ಷ ಪ್ರಾಯದೊಳಗಿನ ಮಕ್ಕಳು ಮೂವರಿದ್ದಾರೆ. ವಿಮಾನ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಉಡುಪಿಗೆ ಕರೆ ತರಲಾಯಿತು. ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತೆರೆದಿರುವ ರಿಸಿವಿಂಗ್ ಪಾಯಿಂಟ್ಗೆ ಬಂದ ಎಲ್ಲರ ನೋಂದಣಿ ಮಾಡಿಸಲಾಯಿತು.
ಉಡುಪಿಗೆ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ 10 ಮಂದಿ ಉಡುಪಿ ತಾಲೂಕಿನವರು, ಕಾಪು ತಾಲೂಕಿನ ನಾಲ್ವರು, ಕುಂದಾಪುರ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ಇಬ್ಬರಿದ್ದಾರೆ. ಬ್ರಹ್ಮಾವರ ಮತ್ತು ಬೈಂದೂರು ತಾಲೂಕಿನ ತಲಾ ಒಬೊಬ್ಬರು ಸೇರಿದ್ದಾರೆ. ಇವರ ಪೈಕಿ 18 ಮಂದಿಯನ್ನು ನಿರ್ದಿಷ್ಟ ಲಾಡ್ಜ್ ಮತ್ತು ಮೂವರನ್ನು ಹಾಸ್ಟೆಲ್ ನಲ್ಲಿ ಸಾಂಸ್ಥಿಕ ದಿಗ್ಬಂಧನಕ್ಕೆ ಕಳುಹಿಸಲಾಯಿತು.
ಬೋರ್ಡ್ ಹೈಸ್ಕೂಲ್ನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿ ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ ಅವರ ಮಾರ್ಗದರ್ಶನದಲ್ಲಿ ಕಂದಾಯ ಮತ್ತು ಸರ್ವೇ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.